ದಾವಣಗೆರೆ: ಒಂದೇ ಕುಟುಂಬದ ಐವರು ನಾಳೆ (ಫೆ. 22) ಬೆಳಗ್ಗೆ 8 ಗಂಟೆಗೆ ನಗರದ ಆವರಗೆರೆ ಶ್ರೀ ನಾಗೇಶ್ವರ ಪಾರ್ಶ್ವ ಭೈರವ ಜೈನ ದೇವಸ್ಥಾನದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಶ್ರೀ ಸುಪಾರ್ಶ್ವನಾಥ ಶ್ವೇತಾಂಬರ ಜೈನ ಮೂರ್ತಿ ಪೂಜಕ ಸಂಘದ ಅಧ್ಯಕ್ಷ ಪಿ. ಮಹೇಂದ್ರಕುಮಾರ್ ಜೈನ್, ಒಂದೇ ಕುಟುಂಬದ ಮೂರು ತಲೆಮಾರಿನ ಐದು ಮಂದಿ ದೀಕ್ಷೆ ಸ್ವೀಕರಿಸುತ್ತಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು ಎಂದು ತಿಳಿಸಿದರು.
ದಾವಣಗೆರೆ ನಿವಾಸಿಗಳಾದ 75 ವರ್ಷದ ವರದಿಚಂದ್ ಜೀ, ಅವರ ಪುತ್ರ 47 ವರ್ಷದ ಅಶೋಕ್‌ಕುಮಾರ್ ಜೈನ್, ಸೊಸೆ 45 ವರ್ಷದ ಭಾವನ ಅಶೋಕ್‌ಕುಮಾರ್ ಜೈನ್, ಮೊಮ್ಮಕ್ಕಳಾದ 17 ವರ್ಷದ ಪಕ್ಷಾಲ್ ಜೈನ್ ಹಾಗೂ 15 ವರ್ಷದ ಜಿನಾಂಕ್ ಜೈನ್ ದೀಕ್ಷೆ ಪಡೆಯಲಿದ್ದಾರೆ.ಇವರೊಂದಿಗೆ ಚೆನ್ನೈನ 23 ವರ್ಷದ ಲಕ್ಷಕುಮಾರ್ ಜೈನ್ ಸಹ ಸನ್ಯಾಸ ಸ್ವೀಕರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಆಚಾರ್ಯ ಮೇಘದರ್ಶನ್ ಸುರೀಜಿ ಮಹಾರಾಜ, ಆಚಾರ್ಯ ಗಚ್ಛಾದಿಪತಿ ಉದಯ ಪ್ರಭಾ ಸುರೀಜಿ ಮಹಾರಾಜ ಹಾಗೂ ಆಚಾರ್ಯ ಹೀರಚಂದ್ರ ಸುರೀಜಿ ಮಹಾರಾಜರ ಸಾನ್ನಿಧ್ಯದಲ್ಲಿ ಈ ಐತಿಹಾಸಿಕ ದೀಕ್ಷೆ ಕಾರ್ಯಕ್ರಮ ನಡೆಯಲಿದೆ. ದೀಕ್ಷೆ ಸ್ವೀಕಾರ ಹಿನ್ನೆಲೆಯಲ್ಲಿ ಫೆ. 21ರಂದು ಬೆಳಿಗ್ಗೆ 9 ಗಂಟೆಯಿಂದ ನಗರದ ಚೌಕಿಪೇಟೆಯ ಜೈನ ದೇವಸ್ಥಾನದ ಮುಂಭಾಗದಿಂದ ಕೆ.ಆರ್. ರಸ್ತೆ, ಮಂಡಿಪೇಟೆ, ಅಶೋಕ ರಸ್ತೆ, ಗಾಂಧಿ ವೃತ್ತದಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ.
ಈ ಸಂದರ್ಭದಲ್ಲಿ ನರೇಂದ್ರಕುಮಾರ ಜೈನ್, ಜಯತಂದ್, ಮಹಾವೀರ ಜೈನ್, ಗೌತಮ್ ಜೈನ್ ಉಪಸ್ಥಿತರಿದ್ದರು.



