ದಾವಣಗೆರೆ: ಇನ್ಸ್ಟಾಗ್ರಾಂನಲ್ಲಿ ಬಂದ ಲಿಂಕ್ ಮೇಲೆ ಕ್ಲಿಕ್ ಮಾಡಿ ವ್ಯಾಪಾರಿಯೊಬ್ಬ 51 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ.
ಹೆಚ್ಚಿನ ಹಣದ ಲಾಭದ ಆಸೆಗೆ ಬಿದ್ದು ಹೊನ್ನಾಳಿ ತಾಲೂಕು ಹೊಸಹಳ್ಳಿಯ ವ್ಯಾಪಾರಿಯೊಬ್ಬ ಆನ್ಲೈನ್ನಲ್ಲಿ ಹಣ ಹೂಡಿಕೆ ಮಾಡಿದ್ದರು. ಇದರಿಂದ ಬರೋಬ್ಬರಿ 51ಲಕ್ಷ ರೂ. ಕಳೆದುಕೊಂಡಿದ್ದಾರೆ. ಹೂಡಿಕೆ ಮಾಡಿದ್ರೆ ಶೇ. 200ರಷ್ಟು ಲಾಭ ಸಿಗಲಿದೆ ಎಂದು ಇನ್ಸ್ಟಾಗ್ರಾಂನಲ್ಲಿ ಬಂದ ಲಿಂಕ್ ಮೇಲೆ ಕ್ಲಿಕ್ ಮಾಡಿದ ಮಧುಕುಮಾರ್ ಎಂಬ ವ್ಯಾಪಾರಿ ಹೆಸರು, ಪ್ಯಾನ್ಕಾರ್ಡ್, ಕೆವೈಸಿ, ಫೋನ್ ನಂಬರ್ ಎಲ್ಲವೂ ತುಂಬಿ ತಮ್ಮ ಹೊಸ ಐಡಿ ತೆರೆದಿದ್ದಾರೆ.
ಹೆಚ್ಚಿನ ಹಣ ಹೂಡಿದರೆ ಶೇ.200 ಬೋನಸ್ ಕೊಡುವುದನ್ನು ನಂಬಿ 22-9-2024 ರಿಂದ 26-04-2025 ವರೆಗೆ 51,24,464ರೂ. ಹಣ ಆನ್ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ. 20ಲಕ್ಷ ರೂ. ಹಾಕಿದಾಗ 9 ಲಕ್ಷ ಲಾಭಾಂಶ ತೋರಿಸಲಾಗಿತ್ತು. ಅದನ್ನು ಬಿಡಿಸಿಕೊಳ್ಳಲು ಮುಂದಾದಾಗ ನಿಮ್ಮ ಬೋನಸ್ ಇನ್ನೂ ಪೂರ್ಣಗೊಂಡಿಲ್ಲ. 50 ಲಕ್ಷ ರೂ. ಹೂಡಿಕೆ ಮಾಡಿದ ಮೇಲೆ ನಿಮಗೆ ಶೇ. 200 ಲಾಭವನ್ನು ನಮಗೆ ಯಾವುದೇ ಕಮಿಶನ್ ನೀಡದೇ ಬಿಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಇದನ್ನು ನಂಬಿದ ಮಧುಕುಮಾರ್ 51ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಬೋನಸ್ ಸೇರಿ 1.05 ಕೋಟಿ ರೂ. ಲಾಭ ಆನ್ಲೈನ್ನಲ್ಲಿ ತೋರಿಸುತ್ತಿತ್ತು. ವಿತ್ ಡ್ರಾ ಒತ್ತಿದಾಗ ಈ ಹಣದಲ್ಲಿ ಜಿಎಸ್ಟಿ, ಟಿಸಿಎಸ್ ಎಂದು ಶೇ.40 ರಷ್ಟು ಹಣ ಕಟ್ ಆಗುತ್ತದೆ. ವಿತ್ ಡ್ರಾ ಮಾಡಬೇಡಿ ಎಂದು ಚಾಟ್ ಮಾಡಿದ್ದಾರೆ. ಇದನ್ನು ನಿರಾಕರಿಸಿ ಹಣ ಬಿಡಿಸಿಕೊಳ್ಳಲು ಮುಂದಾದಾಗ ನನ್ನ ಖಾತೆ ಬ್ಲಾಕ್ ಮಾಡಲಾಗಿದೆ. 24 ಗಂಟೆ ನಂತರ ಅಕೌಂಟ್ ರೀ ಓಪಬ್ ಆಗಿದ್ದು, ಬ್ಯಾಲೆನ್ಸ್ ಚೆಕ್ ಮಾಡಿದಾಗ ಎಲ್ಲಾ ಜಿರೋ ತೋರಿಸಿದೆ. ಚಾರ್ಟ್ ಬೋರ್ಡ್ನಲ್ಲಿ ಸಂಪರ್ಕಿಸಿದಾಗ ಎಲ್ಲವೂ ಡಿಲಿಟ್ ಮಾಡಿರುವುದು ಕಂಡಾಗಲೇ ನಾನು ಮೋಸ ಹೋಗಿರುವುದು ಗೊತ್ತಾಗಿದೆ.
ಈ ಬಗ್ಗೆ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.