ದಾವಣಗೆರೆ: ನಗರದ ಪಿ.ಬಿ ರಸ್ತೆಯ ರಿಲಯನ್ಸ್ ಮಾರ್ಟ್ ಮಂಭಾಗ ನಿಲ್ಲಿಸಿ ಹೋಗಿದ್ದ ಕಾರಿನ ಗ್ಲಾಸ್ ಹೊಡೆದು 1.15 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ.
ಜಿಲ್ಲೆಯ ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮದ ಇಂಜಿನಿಯರ್ ಶ್ರೇಣಿಕ ರಾಜ ಎಂಬುವರ ಕಾರಿನಲ್ಲಿದ್ದ 5 ಸಾವಿರ ನಗದು ಹಾಗೂ 1.15 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಶ್ರೇಣಿಕರಾಜ ಅವರು ಅಕ್ಕನ ಮಗಳ ನಾಮಕರಣಕ್ಕೆ ಮಂಗಳೂರಿಗೆ ಕುಟುಂಬ ಸಮೇತರಾಗಿ ಹೋಗಬೇಕಿತ್ತು. ಇದಕ್ಕೂ ಮುನ್ನ ಮಂಡಿಪೇಟೆಯ ಜುವೆಲ್ಲರಿ ಶಾಪ್ ನಲ್ಲಿ 1.5 ಗ್ರಾಂ ತೂಕದ ಎರಡು ಜೊತೆ ಬಂಗಾರದ ಕಿವಿ ಒಲೆ, ಎರಡು ಜತೆ ಕಾಲು ಗೆಜ್ಜೆ, ಗ್ರಾಂ ತೂಕದ ಬೆಳ್ಳಿ ಲೋಟ,25 ಗ್ರಾಂ ಬೆಳ್ಳಿ ಕಡಗ ಮತ್ತು ಅವರ ಅಕ್ಕನ 12 ಗ್ರಾಂ ತೂಕದ ಬಂಗಾರದ ಸರ, 70 ಗ್ರಾಂ ತೂಕದ ಕಾಲು ಚೈನ್, ಒಂದು ಮೊಬೈಲ್ ಹಾಗೂ 5 ಸಾವಿರ ನಗದು ಇತ್ತು. ಊಟ ಮುಗಿಸಿ ರಿಲಯನ್ಸ್ ಮಾರ್ಟ್ ನಲ್ಲಿ ರೇಷನ್ ತರಲು ಕಾರ್ ಪಾರ್ಕ್ ಮಾಡಿ ಹೋಗಿದ್ದಾಗ ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



