ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗಮನ ಬೇರೆಡೆ ಸೆಳೆದು ಹಣ ಕಳವು ಮಾಡುತ್ತಿದ್ದ ಇಬ್ಬರು ಅಂತರ ರಾಜ್ಯ ಕಳ್ಳರ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 21ಲಕ್ಷ ವಶಕ್ಕೆ ಪಡೆಯಲಾಗಿದೆ.
ಚೆನೈನ ನರೇಶ್ ಹಾಗೂ ಬೆಳಗಾವಿಯ ಲೋಂಡಾದ ಮಹಮ್ಮದ್ ಹುಸೇನ್ ಬಂಧಿತರು. ದಾವಣಗೆರೆ ಜಿಲ್ಲೆಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಮನ ಬೇರೆಡೆ ಸೆಳೆದು ಲಕ್ಷಾಂತರ ಕಳ್ಳತನ ಮಾಡಿ ಪರಾರಿಯಾದ ಕುರುತು ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ಆರೋಪಿತರನ್ನು ಪತ್ತೆಗೆ ಪೊಲೀಸ್ ಉಪಾಧೀಕ್ಷಕ ಬಿ.ಎಸ್.ಬಸವರಾಜ್ , ಡಿಸಿಎಫ್ ಬಿ ಘಟಕ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಆರೋಪಿತರ ಪತ್ತೆ ಬಗ್ಗೆ ಚೆನ್ನೈ , ಬೆಳಗಾವಿ , ಓ.ಜಿ.ಕುಪ್ಪಂ , ಬೆಳಗಾವಿಯ ಗಡಿಭಾಗದ ಲೋಂಡಾ , ಬೆಂಗಳೂರು ಮುಂತಾದ ಕಡೆಗಳಲ್ಲಿ ಹುಡುಕಾಟ ನಡೆಸಿ ಖಚಿತ ಮಾಹಿತಿ ಮೇಲೆ ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಚೆನ್ನೈ ಮೂಲದ ನರೇಶ ಮತ್ತು ಲೋಂಡಾ ಮೂಲದ ಮೊಹಮದ್ ಹುಸೇನ್ ಬಂಧಿಸಲಾಗಿದೆ.ಬಂಧಿತರನ್ನು ವಿಚಾರಣೆ ಮಾಡಿದಾಗ ಗಮನ ಬೇರೆಡೆ ಸೆಳೆದು ಹಣ ದೋಚಿದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಎಸ್ ಪಿ ಸಿ.ಬಿ. ರಿಷ್ಯಂತ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಆರೋಪಿತರು ದಾವಣಗೆರೆ ವಿದ್ಯಾನಗರ ಪೊಲೀಸ್ ಠಾಣೆಯ 2 ಪ್ರಕರಣಗಳಲ್ಲಿ ಒಟ್ಟು 6 ಲಕ್ಷ ಹಣ , ಹರಿಹರ ನಗರ ಪೊಲೀಸ್ ಠಾಣೆಯ 1 ಪ್ರಕರಣದಲ್ಲಿ 2 ಲಕ್ಷ, ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣೆಯ 1 ಪ್ರಕರಣದಲ್ಲಿ 13 ಲಕ್ಷ ಹಣ ಎಲ್ಲಾ ಸೇರಿ 4 ಪ್ರಕರಣಗಳಲ್ಲಿ ಒಟ್ಟು 21 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.