ದಾವಣಗೆರೆ: ಜೆಡಿಎಸ್ ಮುಖಂಡ ಟಿ.ಅಸ್ಗರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಸಂಬಂಧ 6 ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದ್ದು, ಆರೋಪಿಗಳ ಬಂಧನಕ್ಕೆ ಎರಡು ತಂಡ ರಚನೆ ಮಾಡಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ (Davanagere) ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಟಿ.ಅಸ್ಗರ್ ಮೇಲೆ ರೌಡಿಶೀಟರ್ ಖಾಲೀದ್ ಪೈಲ್ವಾನ್ ಅಂಡ್ ಗ್ಯಾಂಗ್ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಘಟನೆ ಸೋಮವಾರ (ಅ.10) ತಡ ರಾತ್ರಿ ನಡೆದಿತ್ತು. ಈ ಸಂಬಂಧ ಟಿ. ಅಸ್ಗರ್ ಕುಟುಂಬದವರು ನೀಡಿದ ದೂರಿನ ಮೇಲೆ 6 ಜನರ ವಿರುದ್ಧ ಕೇಸ್ ದಾಖಲಾಗಿದೆ.
ದಾವಣಗೆರೆಯ ಬಾಷಾ ನಗರ ಐದನೇ ಕ್ರಾಸ್‌ನಲ್ಲಿ ಘಟನೆ ನಡೆದಿದೆ.ಈ ಹಿಂದೆ ಅಸ್ಗರ್ ಗೆ ಹಾಗೂ ರೌಡಿಶೀಟರ್ ಖಾಲೀದ್ ಪೈಲ್ವಾನ್ ನಡುವೆ ರಾಜಿ ಪಂಚಾಯತ್ ವಿಚಾರವಾಗಿ ಗಲಾಟೆಯಾಗಿತ್ತು. ಇದಲ್ಲದೆ, ಕೆಲ ದಿನಗಳಿಂದ ಇಬ್ಬರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಾಕ್ಸಮರ ನಡೆಯುತ್ತಿತ್ತು. ಇದೀಗ ಒಬ್ಬಂಟಿಯಾಗಿ ಸಿಗುತ್ತಿದ್ದಂತೆ ಅಸ್ಗರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಅಸ್ಗರ್ ಕುಟುಂಬಸ್ಥರು ಖಾಲಿದ್ ಪೈಲ್ವಾನ್ ಹಾಗೂ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಹಳೇ ವೈಷ್ಯಮ್ಯದಿಂದ ಟಿ.ಅಸ್ಗರ್ ಮೇಲೆ ತಲ್ವಾರ್‌ನಿಂದ ಹಲ್ಲೆ ಮಾಡಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದರು. ಕೂಡಲೇ ಗಾಯಾಳುವನ್ನು ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆ ಗೆ ರವಾನಿಸಲಾಗಿದೆ.



