ದಾವಣಗೆರೆ: ಊರಿಗೆ ಹೋಗಿ ಬರುವಷ್ಟರಲ್ಲಿ ಮನೆ ಬೀಗ ಮುರಿದು 2.18 ಲಕ್ಷ ಮೌಲ್ಯದ ಚಿನ್ನ ಕಳ್ಳತನ ಮಾಡಿದ ಘಟನೆ ನಗರದ ತುಂಗಭದ್ರಾ ಬಡಾವಣೆಯಲ್ಲಿ ನಡೆದಿದೆ.
ಅಂಚೆ ಇಲಾಖೆ ಉದ್ಯೋಗಿ ಎಸ್.ಎನ್. ಮಲ್ಲಪ್ಪ ಎಂಬುವವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಬೀಗ ಹಾಕಿಕೊಂಡು ಸಿಂಗ್ರಿಹಳ್ಳಿಗೆ ಹೋಗಿದ್ದರು. ಆದರೆ, ಮರು ದಿನ ಮನೆಗೆ ಬಂದು ನೋಡಿದಾಗ ಬೀಗ ಮುರಿದು 2.18 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ನಡೆದಿತ್ತು.
ಮಲ್ಲಪ್ಪ, ಶನಿವಾರ ಕುಟುಂಬ ಸಮೇತ ಹರಪನಹಳ್ಳಿ ತಾಲ್ಲೂಕಿನ ಸಿಂಗ್ರಿಹಳ್ಳಿ ಗ್ರಾಮಕ್ಕೆ ತೆರಳಿದ್ದರು. ಮರು ದಿನ ಮನೆಗೆ ಮರಳಿದಾಗ ಕೃತ್ಯ ಗೊತ್ತಾಗಿದೆ. ಮನೆಯ ಬೀಗ ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಬೀರುವಿನಲ್ಲಿದ್ದ 1.9 ಲಕ್ಷ ಮೌಲ್ಯದ ಚಿನ್ನಾಭರಣ, 25,500 ಮೌಲ್ಯದ ಬೆಳ್ಳಿ ಸಾಮಗ್ರಿ ಹಾಗೂ 1,000 ನಗದು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



