ದಾವಣಗೆರೆ: ಕಾನೂನು ಬಾಹಿರವಾಗಿ ಆಟೋಗಳಲ್ಲಿ ಹೆಚ್ಚುವರಿಯಾಗಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಎರಡು ಆಟೋಗಳನನ್ನು ಉತ್ತರ ಸಂಚಾರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದು, ಆಟೋ ಚಾಲಕರ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.
ಸಂಚಾರ ನಿಯಮಗಳ ಉಲ್ಲಂಘನೆ
ಎಎಸ್ಪಿ ಪರಮೇಶ್ವರ ಹೆಗಡೆ ನೇತ್ರತ್ವದಲ್ಲಿ ತಡೆದು ಜಿಲ್ಲಾ ಪೊಲೀಸ್ ಕಚೇರಿ ಬಳಿ ಕರೆಯಿಸಿ ಪರಿಶೀಲಿಸಲಾಗಿದೆ. ಒಂದು ಆಟೋದಲ್ಲಿ 14 ಶಾಲಾ ಮಕ್ಕಳು ಇನ್ನೊಂದು ಆಟೋದಲ್ಲಿ 11 ಶಾಲಾ ಮಕ್ಕಳು ಇದ್ದು, ಆಟೋ ಚಾಲಕರುಗಳಿಗೆ ಕಾನೂನು ಬಾಹಿರವಾಗಿ ಹೆಚ್ಚುವರಿಯಾಗಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವುದು ಸಂಚಾರ ನಿಯಮಗಳ ಉಲ್ಲಂಘನೆ ಆಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕೂಡ ಗಂಭೀರ ವಿಷಯವಾಗಿರುತ್ತದೆ. ಇನ್ನು ಮುಂದೆ ಆಟೋಗಳಲ್ಲಿ ಹೆಚ್ಚುವರಿಯಾಗಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗದಂತೆ ಎಚ್ಚರಿಕೆ ನೀಡಿದ್ದು, ಉತ್ತರ ಸಂಚಾರ ಠಾಣೆಯ ಪೊಲೀಸರು 2 ಆಟೋಗಳನ್ನು ವಶಕ್ಕೆ ಪಡೆದಿದ್ದು, ಆಟೋ ಚಾಲಕರ ವಿರುದ್ಧ 02 ಪ್ರತ್ಯೇಕ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಆಟೋಗಳಲ್ಲಿದ್ದ ಶಾಲಾ ಮಕ್ಕಳನ್ನು ಕಚೇರಿಯಲ್ಲಿ ಕೂರಿಸಿಕೊಂಡು ಉಪಚರಿಸಿದ್ದು, ಮಕ್ಕಳ ಪೋಷಕರುಗಳನ್ನು ಕರೆಯಿಸಿ ಶಾಲಾ ಮಕ್ಕಳನ್ನು ನಿರ್ಲಕ್ಷ್ಯ ವಹಿಸಿ ಆಟೋಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚುವರಿಯಾಗಿ ಮಕ್ಕಳನ್ನು ಆಟೋಗಳಲ್ಲಿ ಕಳುಹಿಸಬಾರದು ಹಾಗೂ ಅದು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದಲ್ಲ ಜವಾಬ್ದಾರಿಯುತ ನಾಗರಿಕರಾಗಿ ಹಾಗೂ ಪೋಷಕರಾಗಿ ವರ್ತಿಸಬೇಕು ಎಂದು ತಿಳಿ ಹೇಳಿದರು.
ಎಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಎಚ್ಚರಿಕೆ ನೀಡಿದರು. ನಂತರ ಮಕ್ಕಳನ್ನು ಅವರ ಪೋಷಕರುಗಳೊಂದಿಗೆ ಕಳುಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಸಂಚಾರ ಸಿಪಿಐ ನಲವಾಗಲು ಮಂಜುನಾಥ, ಉತ್ತರ ಸಂಚಾರ ಠಾಣೆಯ ಪಿಎಸ್ ಐ ಮಹಾದೇವ ಭತ್ತೆ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಆಟೋ ಚಾಲಕರ ಗಮನಕ್ಕೆ
ಆಟೋ ಚಾಲಕರುಗಳು ಸೇರಿದಂತೆ ಎಲ್ಲಾ ಶಾಲಾ ವಾಹನಗಳ ಚಾಲಕರುಗಳಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಗದಿತ ಸಂಖ್ಯೆಗಿಂತ ಹೆಚ್ಚುವರಿಯಾಗಿ ಶಾಲಾ ಮಕ್ಕಳನ್ನು ಶಾಲಾ ವಾಹನಗಳಲ್ಲಿ ಕರೆದುಕೊಂಡು ಹೋಗುವಂತಿಲ್ಲ, ಹಾಗೂ ಎಲ್ಲಾ ಶಾಲಾ ವಾಹನಗಳ ಚಾಲಕರುಗಳು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಪೊಲೀಸ್ ಅಧೀಕ್ಷಕರು ಸೂಚಿಸಿದರು.



