ದಾವಣಗೆರೆ: ನಗರದ ಹೊರವಲಯದ ಬಾಡಾ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳು ಹಾಗೂ ದಾವಣಗೆರೆ ಖಾಸಗಿ ವೈದ್ಯಕೀಯ ಕಾಲೇಜ್ ವಿದ್ಯಾರ್ಥಿ ಸೇರಿದಂತೆ ಒಟ್ಟು ಐವರನ್ನು ದಾವಣಗೆರೆ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರ ವಿವರ
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಕಾರಿನಲ್ಲಿ ಕುಳಿತು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಈ ಐವರನ್ನು ಬಂಧಿಸಿದ್ದಾರೆ. ಬೆಂಗಳೂರು ನೆಲೆಸಿರುವ ನೈಜೀರಿಯಾ ಮೂಲದ ಪ್ಯಾಟ್ರಿಕ್ (44), ಪ್ರಾಮೇಸೆ (42), ಬೆಂಗಳೂರಿನ ಮೊಹಮ್ಮದ್ ಬಿಲಾಲ್ (29) ಸೈಯದ್ ಜಾಬೀರ್ (31) ಹಾಗೂ ದಾವಣಗೆರೆಯ ಖಾಸಗಿ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಕಲ್ಯಾಣ್ (24) ಆಗಿದ್ದಾರೆ.
ವಿದ್ಯಾರ್ಥಿಗಳೇ ಇವರ ಟಾರ್ಗೆಟ್
ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ದಾವಣಗೆರೆ ವೈದ್ಯಕೀಯ ವಿದ್ಯಾರ್ಥಿ ಕಲ್ಯಾಣ್‌ಗೆ ಡ್ರಗ್ಸ್ ಮಾರಾಟ ಮಾಡಲು ಉಳಿದ ನಾಲ್ವರು ಬೆಂಗಳೂರಿಂದ ಬಂದಿದ್ದರು. ಈ ಗ್ಯಾಂಗ್ ಸಿಗರೇಟ್‌ಗಳಲ್ಲಿ ಡ್ರಗ್ಸ್ ತುಂಬಿಸಿ ಮಾರಾಟ ಮಾಡುತ್ತಿತ್ತು. ಬಂಧಿತರಿಂದ 13 ಗ್ರಾಂ ಎಂಡಿಎಂಎ ಡ್ರಗ್, ಆರು ಮೊಬೈಲ್ ಫೋನ್‌ಗಳು ಮತ್ತು ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ದಾವಣಗೆರೆಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಈ ಡ್ರಗ್ಸ್ ಜಾಲದ ಪತ್ತೆಯಿಂದ ನಗರದಲ್ಲಿ ಡ್ರಗ್ಸ್ ಪೆಡ್ಲರ್‌ಗಳಿಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



