ದಾವಣಗೆರೆ: ಹಾಡ ಹಗಲೇ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಯಿಂದ 5.98 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ದೊಡ್ಡಬಾತಿ ಗ್ರಾಮದ ಫಾತಿಮಾ ದಿನಾಂಕ:03/06/2025ರಂದು ಬೆಳಗ್ಗೆ 10-00 ಗಂಟೆ ಸಮಯದಲ್ಲಿ ಮನೆ, ಗೇಟಿಗೆ ಬೀಗ ಹಾಕಿಕೊಂಡು ಹರಿಹರಕ್ಕೆ ಬೆಳ್ಳುಳ್ಳಿ ಶುಂಠಿ ಮಾರಲು ಹೋಗಿದ್ದರು. ವ್ಯಾಪಾರ ಮುಗಿಸಿಕೊಂಡು ಇದೇ ದಿನ ರಾತ್ರಿ 08-00 ಗಂಟೆಗೆ ಬಂದು ನೋಡಿದಾಗ ಮನೆಯ ಮುಂಭಾಗದ ಗೇಟ್ ಹಾಗೂ ಬಾಗಿಲಿಗೆ ಹಾಕಿದ್ದ ಬೀಗ ಇರಲಿಲ್ಲ. ನಂತರ ಗಾಬರಿಯಾಗಿ ಒಳಗೆ ಹೋಗಿ ನೋಡಲಾಗಿ ಮನೆಯ ತುಂಬಾ ಖಾರದ ಪುಡಿ ಚೆಲ್ಲಿದ್ದರು.ರೂಮಿನಲ್ಲಿದ್ದ ಗಾಡ್ರೇಜ್ ಲಾಕ್ ಮುರಿದು ಲಾಕರ್ ನಲ್ಲಿದ್ದ ಒಟ್ಟು 1) 71 ಗ್ರಾಂ ತೂಕದ ಬಂಗಾರದ ಆಭರಣಗಳು, 2) 75 ಗ್ರಾಂ ಬೆಳ್ಳಿ ವಸ್ತುಗಳು ಮತ್ತು 3)2090/- ರೂ ನಗದು ಹಣ ಇವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪರಿಚಿತನಿಂದಲೇ ಕಳ್ಳತನ
ಈ ಪ್ರಕರಣದಲ್ಲಿ ಆರೋಪಿ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ ಜಿ ಹಾಗೂ ಡಿವೈಎಸ್ಪಿ ಬಸವರಾಜ್ ಬಿ. ಎಸ್ ಮಾರ್ಗದರ್ಶನದಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕಿರಣ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿತ್ತು. ಈ ತಂಡ ದೂರುದಾರರಿಗೆ ಕೆಲವು ದಿನಗಳ ಹಿಂದೆ ಪರಿಚಯವಾಗಿದ್ದ ಆರೋಪಿ ಇಮ್ದಾದ್ (44) ಸೋಡಾ ವ್ಯಾಪಾರಿ, ವಾಸ: ಹೊನ್ನಾಳಿ ಟೌನ್ ಈತನ ಮೇಲೆ ಅನುಮಾನ ಬಂದುದಿನಾಂಕ 04.06.2025 ರಂದು ಠಾಣೆಗೆ ಕರೆತಂದು ವಿಚಾರ ಮಾಡಿದಾಗ ಆರೋಪಿತನು ತಾನು ಕಳ್ಳತನ ಮಾಡಿರುವ ವಿಚಾರವನ್ನು ಒಪ್ಪಿಕೊಂಡಿದ್ದಾನೆ.
5,98,090 ರೂ ಮೌಲ್ಯದ ಸ್ವತ್ತ ಜಪ್ತಿ
ಆರೋಪಿತನಿಂದ ಪ್ರಕರಣದಲ್ಲಿ ಕಳುವಾಗಿದ್ದ 1)71 ಗ್ರಾಂ ತೂಕದ ಬಂಗಾರದ ಆಭರಣಗಳು ಅಂದಸಾಜು ಬೆಲೆ 5,30,000- ರೂ ಗಳು ಹಾಗೂ 2)75 ಗ್ರಾಂ ಬೆಳ್ಳಿ ವಸ್ತುಗಳು ಅಂದಾಜು ಬೆಲೆ 16,000/- ರೂ ಗಳು ಮತ್ತು 3)2090/- ರೂ ನಗದು ಹಣ ಸೇರಿದಂತೆ ಸಂಪೂರ್ಣ ಸ್ವತ್ತನ್ನು ಹಾಗು ಕೃತ್ಯಕ್ಕೆ ಬಳಸಿದ 50,000/- ರೂ ಬೆಲೆಯ ಬೈಕ್ ವಶಪಡಿಸಿಕೊಳ್ಳಲಾಗಿದೆ. ಒಟ್ಟು 5,98,090 ರೂ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ. ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗಿಯಾದ ತಂಡಕ್ಕೆ ಎಸ್ಪಿ ಉಮಾ ಪ್ರಕಾಂತ್ ಶ್ಲಾಘಿಸಿದ್ದಾರೆ.