ದಾವಣಗೆರೆ: ಕಳೆದ 21 ದಿನದ ಹಿಂದೆ ಕಳವಾಗಿದ್ದ ಮಗುವನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು. ಮಗು ಕಳವು ಮಾಡಿದ್ದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ಮಾನವ ಕಳ್ಳ ಸಾಗಣಿಕೆ ಪ್ರಕರಣ ದಾಖಲಿಸಲಾಗಿದೆ.
ಆಜಾದ್‌ನಗರ ನಿವಾಸಿ ಜಿಲಾನಿ ಅವರ ಪತ್ನಿ ಗುಲ್ಜರ್‌ಬಾನು (44) ಬಂಧಿತ ಮಗು ಕಳ್ಳತನ ಮಾಡಿದ ಆರೋಪಿಯಾಗಿದ್ದಾರೆ. ಜಿಲಾನಿ-ಗುಲ್ಜರ್‌ಬಾನು ದಂಪತಿಗೆ ಮೂವರು ಮಕ್ಕಳು. ಅದರಲ್ಲಿ ಮೊದಲ ಮಗಳಾದ ಫರ್ಹಾನ್ ಖಾನ್ ಅವರನ್ನು ಬೆಂಗಳೂರಿನ ತೌಸೀಫ್ ಅವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯಾಗಿ ಕೆಲವು ವರ್ಷಗಳಾದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಹರಪನಹಳ್ಳಿ ಗುಂಡಿನಕೆರೆಯ ಇಸ್ಮಾಯಿಲ್ ಜಬೀವುಲ್ಲಾ ಅವರ ಪತ್ನಿ ಉಮೇಸಲ್ಮಾ (22) ಅವರಿಗೆ ಚಾಮರಾಜಪೇಟೆ ಬಳಿಯ ಹೆರಿಗೆ ಆಸ್ಪತ್ರೆಯಲ್ಲಿ ಮಾರ್ಚ್ 16ರಂದು ಹೆರಿಗೆಯಾಗಿತ್ತು. ಹೆರಿಗೆಯಾಗಿ ಒಂದು ಗಂಟೆಗಳಲ್ಲಿ ಆರೋಪಿ ಗುಲ್ಜರ್‌ಬಾನು ಮಗುವನ್ನು ತಗೊಂಡು ಹೋಗಿದ್ದರು. ಆಸ್ಪತ್ರೆಯಿಂದ ಆಟೋದಲ್ಲಿ ಹೋಗಿದ್ದ ಅವರು ಆ ಮಗುವನ್ನು ನೇರವಾಗಿ ಬೆಂಗಳೂರಿಗೆ ಸಾಗಾಟ ಮಾಡಿ ಮಗಳಿಗೆ ನೀಡಿ ಬಂದಿದ್ದರು.
ಮಹಿಳೆ ಮಗುವನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಆಸ್ಪತ್ರೆಯ ಸಿಸಿಟಿವಿ ಯಲ್ಲಿ ಸೆರೆಯಾಗಿತ್ತು. ಈ ದೃಶ್ಯ ಇಟ್ಟುಕೊಂಡು ಪೊಲೀಸರು ನಗರದಲ್ಲಿ ಮನೆ ಮನೆ ಹುಡುಕಾಟ ಆರಂಭವಾಗಿತ್ತು. ಆಜಾದ್‌ನಗರದ ಗುಲ್ಜರ್‌ಬಾನು ಮತ್ತು ಸಿಸಿಟಿವಿ ಯಲ್ಲಿ ಕಂಡು ಬಂದ ಮಹಿಳೆಯ ನಡುವೆ ಹೋಲಿಕೆ ಆಗುತ್ತಿತ್ತು. ಈ ಮಹಿಳೆ ವಿಚಾರಣೆ ವೇಳೆ ಮಗು ಕಳ್ಳನವನ್ನು ಒಪ್ಪಿಕೊಂಡಿರಲಿಲ್ಲ.
ನಂತರ ಗುಜ್ಜರ್ ಬಾನು ಮಗಳಿಗೆ ಫೋನ್ ಮಾಡಿ ಮಗು ವಾಪಸ್ ಕೊಡುವಂತೆ ಹೇಳಿದ್ದರು. ಸಂಜೆ ಮಗು ಹೈಸ್ಕೂಲ್ ಫೀಲ್ಡ್‌ನಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಕುಳಿತಿದ್ದ ಅಜ್ಜಿಗೆ ಮಗುವನ್ನು ನೀಡಿ ಬಾತ್‌ರೂಂಗೆ ಹೋಗಿ ಬರ್ತೇನೆ ಎಂದು ಹೇಳಿ ಬುರ್ಕಾಧಾರಿ ಮಹಿಳೆ ನಾಪತ್ತೆಯಾಗಿದ್ದರು. ಬಡಾವಣೆ ಪೊಲೀಸ್ ಠಾಣೆಯಲ್ಲಿ ಮಗು ಪತ್ತೆ ಪ್ರಕರಣ ದಾಖಲಾಗಿತ್ತು.
ಮಗು ತೆಗೆದುಕೊಂಡು ಹೋಗಿಲ್ಲ ಎಂದು ಹೇಳುತ್ತಿದ್ದ ಗುಲ್ಜರ್‌ಬಾನು ಅವರ ಮೊಬೈಲ್ ಕರೆಗಳ ದಾಖಲೆ ಪರಿಶೀಲಿಸಿದಾಗ ಆಕೆಯೇ ಒಯ್ದಿರುವುದು ಪೊಲೀಸರಿಗೆ ಖಚಿತವಾಗಿತ್ತು. ಆಕೆಯನ್ನು ಬಂಧಿಸಿದಾಗ ಆಕೆ ಮಗು ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಪತ್ತೆಯಾದ ಮಗುವನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿ.ಜಿ. ಆಸ್ಪತ್ರೆಯ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು ಮಗುವಿನ ಇಸ್ಮಾಯಿಲ್ ಜಬೀವುಲ್ಲಾ- ಉಮೇಸಲ್ಮಾ ದಂಪತಿ ಮಗುವನ್ನು ಒಪ್ಪಿಸಿದ್ದಾರೆ.



