ದಾವಣಗೆರೆ: ಜಿಲ್ಲೆಯ ಹರಿಹರ ನಗರಸಭೆಯಲ್ಲಿ ಖಾಸಗಿ ನೌಕರರಿಗೆ ಸರ್ಕಾರಿ ನೌಕರರಂತೆ ಸೌಲಭ್ಯ ಕಲ್ಪಿಸಿದ ಆರೋಪ ಹಿನ್ನೆಲೆ ಪೌರಾಯುಕ್ತ, ಕಂದಾಯ ಅಧಿಕಾರಿ, ಪ್ರಭಾರ ಕಂದಾಯ ಅಧಿಕಾರಿ, ಕಚೇರಿ ವ್ಯವಸ್ಥಾಪಕಿ ಸೇರಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಲೋಕಾಯುಕ್ತ ಪೊಲೀಸರು ದೂರು ಸಲ್ಲಿಸಿದ್ದಾರೆ. ಈ ದೂರಿನ ಅನ್ವಯ ಹರಿಹರ ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಕಚೇರಿ ವ್ಯವಸ್ಥಾಪಕಿ ನಿರಂಜನಿ, ಕಂದಾಯ ನಿರೀಕ್ಷಕಿ ಚಿತ್ರ, ಪ್ರಭಾರ ಕಂದಾಯ ನಿರೀಕ್ಷಕ ರಮೇಶ್, ಸರ್ಕಾರಿ ನೌಕರರಂತೆ ಕೆಲಸ ಮಾಡುತ್ತಿದ್ದ ಮೌನೇಶ್, ಮಹಮ್ಮದ್ ಹಫೀಜ್ ವುಲ್ಲಾ ಮತ್ತು ಹನುಮಂತಪ್ಪ ತುಂಬಿಗೆರೆ ವಿರುದ್ಧ ಲೋಕಾಯುಕ್ತ ಉಪಾಧೀಕ್ಷಕಿ ಕಲಾವತಿ ನೀಡಿದ ದೂರಿನ ಆಧಾರದ ಮೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಿಲ್ಲಾ ಲೋಕಾಯುಕ್ತ ಪೊಲೀಸರು ಏ. 7 ರಂದು ಹರಿಹರ ನಗರಸಭೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೌನೇಶ್, ಮಹಮ್ಮದ್ ಹಫೀಜ್ ವುಲ್ಲಾ ಸರ್ಕಾರಿ ನೌಕರರಂತೆ ಕೆಲಸ ಮಾಡುತ್ತಿದ್ದರು. ಆಗ ವಿಚಾರಣೆ ನಡೆಸಿದಾಗ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಕಚೇರಿ ವ್ಯವಸ್ಥಾಪಕಿ ನಿರಂಜನಿ, ಕಂದಾಯ ನಿರೀಕ್ಷಕಿ ಚಿತ್ರ, ಪ್ರಭಾರ ಕಂದಾಯ ನಿರೀಕ್ಷಕ ರಮೇಶ್ ಅವರ ಆದೇಶದಂತೆ ಕೆಲಸ ಮಾಡುತ್ತಿದ್ದೇವೆ. ತಿಳಿಸಿದ್ದರು. ಇದಲ್ಲದೆ, ಹನುಮಂತಪ್ಪ ತುಂಬಿಗೆರೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದಾಗಿ ಮಾಹಿತಿ ನೀಡಿದ್ದರು.
ಏ. 1 ರಿಂದ 7 ರವರೆಗೆ ಸಾರ್ವಜನಿಕರಿಂದ ಒಟ್ಟು 1,63, 266 ರೂ. ಸಂಗ್ರಹಿಸಿದ್ದರು. ಅದರಲ್ಲಿ 89, 400 ರೂ.ಗಳನ್ನು ಹಫೀಜ್ ವುಲ್ಲಾನ ಸಹೋದರಮ ಎಸ್ ಬಿಐ ಖಾತೆಯಲ್ಲಿ ಜಮೆ ಮಾಡಿದ್ದು ಕಂಡು ಬಂದಿತ್ತು. ಪೊಲೀಸರು ತನಿಖೆ ಕೈಗೊಂಡಿದ್ದಾರೆ.