ದಾವಣಗೆರೆ: ಆಟೋದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಬ್ಯಾಗ್ ಅನ್ನು ಪ್ರಾಮಾಣಿಕತೆಯಿಂದ ಆಟೋ ಚಾಲಕ ವಾರಸುದಾರರಿಗೆ ಹಿಂತಿರುಗಿಸಿದ್ದು, ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಫೆ. 15 ರಂದು ನಗರದಲ್ಲಿ ಆಟೋದಲ್ಲಿ ಪ್ರಯಾಣಿಕರೊಬ್ಬರು ತಮ್ಮ ಬ್ಯಾಗ್ ಬಿಟ್ಟು ಹೋಗಿದ್ದರು. ಈ ಬ್ಯಾಗ್ ಅನ್ನು ಆಟೋ ಚಾಲಕ ಮಂಜುನಾಥ್ ಪ್ರಮಾಣಿಕತೆಯಿಂದ ಆಜಾದ್ ನಗರ ಪೊಲೀಸ್ ಠಾಣೆಗೆ ತಂದು ಕೊಟ್ಟಿದ್ದು, ಈ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಬಟ್ಟೆ, ಇತರೆ ವಸ್ತುಗಳು ಹಾಗೂ ವಿವಿಧ ದಾಖಲೆಗಳು ಇದ್ದವು.
ಆಜಾದ್ ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಈ ಬ್ಯಾಗ್ ಕಕ್ಕರಗೊಳ್ಳ ನಿವಾಸಿಯಾದ ಸುನೀಲ್ ಸೇರಿದ್ದು ಎಂದು ಪತ್ತೆ ಮಾಡಿದ್ದು, ಠಾಣೆಗೆ ಕರೆಯಿಸಿ ಆಟೋ ಚಾಲಕನ ಉಪಸ್ಥಿತಿಯಲ್ಲಿ ವಾರಸುದಾರರಿಗೆ ಬ್ಯಾಗ್ ಹಸ್ತಾಂತರಿಸಿದ್ದಾರೆ. ಈ ಸಂಧರ್ಭದಲ್ಲಿ ಪಿಎಸ್ಐ ಇಮ್ತಿಯಾಜ್, ಮಹಮ್ಮದ್ ಅಲ್ತಾಫ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಆಟೋ ಚಾಲಕ ಮಂಜುನಾಥ್ ಪ್ರಾಮಾಣಿಕತೆ ಶ್ಲಾಘಿಸಿ, ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದಿಸಲಾಯಿತು.



