ದಾವಣಗೆರೆ: ಪೂಜೆ ಮಾಡಿ ಕಷ್ಟ ಪರಿಹರಿಸುವ ಸೋಗಿನಲ್ಲಿ ಮನೆ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳಿಂದ 8,65,000 ರೂ. ಮೌಲ್ಯದ 90 ಗ್ರಾಂ ಚಿನ್ನ ಹಾಗೂ 750 ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳು ವಶಕ್ಕೆ ಪಡೆಯಲಾಗಿದೆ.
ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದ ಶ್ರೀಮತಿ ಶಶಿಕಲಾಎಂಬುವರ ಮನೆಯಲ್ಲಿರುವ ಹಣಕಾಸಿನ ಸಮಸ್ಯೆ ಪರಿಹಾರ ಮಾಡಲು ಪೂಜೆ ಮಾಡುತ್ತೇವೆ ಎಂದು ಹೇಳಿಕೊಂಡು ಇಸ್ಮಾಯಿಲ್ ಜಬೀವುಲ್ಲಾ ಮತ್ತು ರುಕ್ಸಾನ ಬೇಗಂ ಎಂಬುವರು ದಿನಾಂಕ:-11-02-2025 ರಂದು ಮನೆಗೆ ಬಂದು ಸಂಜೆ 04-00 ಗಂಟೆಯಿಂದ 06-00 ಗಂಟೆ ಅವಧಿಯಲ್ಲಿ ಮನೆಯಲ್ಲಿದ್ದ ಒಟ್ಟು 1,44,000/- ರೂ ಬೆಲೆಯ 02 ತೊಲ 02 ಗ್ರಾಂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.
ಈ ಪ್ರಕರಣ ಪತ್ತೆ ಮಾಡಿ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿತರ ಪತ್ತೆ ಕಾರ್ಯದಲ್ಲಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿಗಳಾದ ವಿಜಯ್ ಕುಮಾರ್ ಸಂತೋಷ, ಮಂಜುನಾಥ ಜಿ, ಡಿವೈಎಸ್ಪಿ ಬಸವರಾಜ ಬಿ.ಎಸ್ , ವೃತ್ತ ನಿರೀಕ್ಷಕರು ಸುರೇಶ ಸಗರಿ ಮಾರ್ಗದರ್ಶನದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಮಂಜುನಾಥ ಎಸ್. ಕುಪ್ಪೇಲೂರು ಪಿ.ಎಸ್.ಐ(ಕಾ&ಸು) ರವರ ನೇತೃತ್ವದಲ್ಲಿ ಪಿ.ಎಸ್.ಐ(ತನಿಖೆ) ಮಹದೇವ ಸಿದ್ದಪ್ಪ ಭತ್ತೆ ಸಿಬ್ಬಂದಿಗಳನ್ನೊಳಗೊಂಡ ತಂಡವು ಪತ್ತೆ ಕಾರ್ಯಚರಣೆ ನಡೆಸಿದೆ.
ಈ ಮೇಲ್ಕಂಡ ಪ್ರಕರಣದ ಆರೋಪಿಗಖಾದ ಎ1-ಇಸ್ಮಾಯಿಲ್ ಜಬೀವುಲ್ಲಾ (30), ಎಲೆಕ್ಟ್ರಿಷಿಯನ್ ಕೆಲಸ, ವಾಸ- ಬಾಷಾನಗರ, ದಾವಣಗೆರೆ. ಎ2 – ರುಕ್ಸಾನ ಬೇಗಂ (30) ಟೈಲರಿಂಗ್ ಕೆಲಸ, ವಾಸ-ಜಗತ್‌ಸಿಂಗ್‌ಪುರ. ಓಡಿಸ್ಸಾ ರಾಜ್ಯ ಇವರನ್ನು ಬಂಧಿಸಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ 02 ಪ್ರಕರಣಗಳು ಮತು ಆಜಾದ್ ನಗರ ಠಾಣೆಯ 01 ಪ್ರಕರಣ ಪತ್ತೆಯಾಗಿದೆ. ಆರೋಪಿಗಳಿಂದ 8,65,000 ರೂ. ಮೌಲ್ಯದ 90 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 750 ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆ ಮುಂದುವರೆದಿದೆ. ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ತಂಡವನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.



