ದಾವಣಗೆರೆ: ಮನೆಬಿಟ್ಟು ಹೈವೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಾನಸಿಕ ಅಸ್ವಸ್ಥ ಯುವತಿಯನ್ನು 112 ಹೊಯ್ಸಳ ಪೊಲೀಸ್ ರಕ್ಷಣೆ ಮಾಡಿದ್ದಾರೆ.
ಜ.13 ರಂದು ರಾತ್ರಿ 07-30 ಗಂಟೆ ಸಮಯದಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿ 112 ಹೊಯ್ಸಳ ಪೊಲೀಸ್ ಸಿಬ್ಬಂದಿ ದಾವಣಗೆರೆ ಗ್ರಾಮಾಂತರ ಠಾಣೆಯ ಸಿಬ್ಬಂದಿಮಂಜುನಾಥ ನಾಯ್ಕ್ ಹಾಗೂ ಚಾಲಕರ ವೀರೇಶ್ ಗಸ್ತಿನಲ್ಲಿದ್ದರು. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಹೆಚ್. ಕಲಪನ ಹಳ್ಳಿ ಬಳಿ ಎನ್.ಹೆಚ್-48 ರಸ್ತೆಯಲ್ಲಿ ಯುವತಿ ಒಂಟಿಯಾಗಿ ಅಡ್ಡಾದಿಡ್ಡಿಯಾಗಿ ನಡೆದುಕೊಂಡು ಹೋಗುತ್ತಿದ್ದರು. ತಕ್ಷಣ ಪೊಲೀಸ್ ಸಿಬ್ಬಂದಿ ಮಹಿಳೆಯನ್ನು ಸ್ಥಳೀಯರ ಸಹಕಾರದಿಂದ ರಕ್ಷಣೆ ಮಾಡಿದ್ದು, ಮಹಿಳೆಯನ್ನು ವಿಚಾರಿಸಿದಾಗ ಸರಿಯಾದ ಮಾಹಿತಿ ನೀಡದೇ ಇದ್ದು ನಂತರ ಮಹಿಳೆಗೆ ಉಪಚರಿಸಿ ವಿಚಾರಿಸಲಾಗಿ ತನ್ನ ಹೆಸರು ವಿಳಾಸವನ್ನು ತಿಳಿಸಿದ್ದಾರೆ. ತಾನು ಮನೆಯಲ್ಲಿ ಗಲಾಟೆ ಮಾಡಿಕೊಂಡು ಬೇಜಾರು ಮಾಡಿಕೊಂಡು ಮನೆ ಬಿಟ್ಟು ಬಂದಿರುವುದಾಗಿ ತಿಳಿಸಿದ್ದು, ಯುವತಿಯು ರಾಣೆಬೆನ್ನೂರು ತಾಲ್ಲೂಕು, ಗುತ್ತಲ ಗ್ರಾಮದವರು ಎಂದು ತಿಳಿದಿದೆ.
ಯುವತಿಯನ್ನು ಠಾಣೆಗೆ ಕರೆತಂದು ಗುತ್ತಲ ಪೊಲೀಸ್ ಠಾಣೆಗೆ ಸಂಪರ್ಕಿಸಲಾಗಿ ಯುವತಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಲು ಪೋಷಕರು ಬಂದಿದ್ದು, ಯುವತಿ ಬುದ್ಧಿಮಾಂದ್ಯ ಎಂದು ತಿಳಿಸಿದ್ದಾರೆ. ಯುವತಿಯ ಪೋಷಕರ ಕೋರಿಕೆ ಮೇರೆಗೆ ಯುವತಿಯ ಸುರಕ್ಷತೆಯ ದೃಷ್ಟಿಯಿಂದ ಯುವತಿಯನ್ನು ದಾವಣಗೆರೆ ತಾ. ರಾಮಗೊಂಡನ ಹಳ್ಳಿಯಲ್ಲಿರುವ ಮಹಿಳೆ ಮತ್ತು ಬಾಲಕಿಯರ ಮಂದಿರದಲ್ಲಿರಿಸಿದ್ದು, ನಂತರ ಯುವತಿಯನ್ನು ಅವರ ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಯುವತಿ ರಕ್ಷಣೆ ಮಾಡಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.