ದಾವಣಗೆರೆ: 10 ರೂ. ಗೆ ಒಂದು ಕೋಲ್ಗೇಟ್ ಕೊಂಡರೆ ಸೂಪರ್ ಲಾಟರಿಯಡಿ ಫ್ರಿಡ್ಜ್, ಎಲ್‍ಇಡಿ ಟಿವಿ, ವಾಷಿಂಗ್ ಮಷಿನ್, ಎಲೆಕ್ಟ್ರಿಕ್ ಸ್ಕೂಟಿ ಬಹುಮಾನ ಸಿಗುತ್ತದೆ ಎಂದು ಜನರಿಗೆ ನಂಬಿಸಿ 6,500 ಕಟ್ಟಿಸಿಕೊಂಡು ಗೃಹ ಬಳಕೆ ವಸ್ತು ನೀಡಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ವಿರುದ್ಧ ದೂರು ದಾಖಲಾಗಿದೆ.
ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಗ್ರಾಮದ ರಾಮಾಂಜನೇಯ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೋಲ್ಗೇಟ್ ಪೇಸ್ಟ್ ಒಳಗಡೆ ಇರುವ ಲಾಟರಿ ಚೀಟಿ ತೆಗೆದುಕೊಂಡು ಹೊನ್ನಾಳಿಯ ಪಾಂಡುರಂಗಪ್ಪ ಮೆಟಲ್ ಸ್ಟೋರ್‌ಗೆ ಬರಬೇಕು. 20 ಜನರಿಗೆ ಈ ಬಹುಮಾನ ಸೌಲಭ್ಯ ಸಿಗಲಿದೆ ಎಂದು ನಂಬಿಸಿ ವಂಚಿಸುತ್ತಿದ್ದರು. ಚೀಟಿಯಲ್ಲಿ ಯಾರಿಗೆ ಲಾಟರಿ ಹೊಡೆಯುತ್ತದೆಯೋ ಅವರಿಗೆ ಫ್ರಿಡ್ಜ್, ಎಲ್‍ಇಡಿ ಟಿವಿ, ವಾಷಿಂಗ್ ಮಷಿನ್, ಎಲೆಕ್ಟ್ರಿಕ್ ಸ್ಕೂಟಿ ನೀಡಲಾಗುವುದು ಎಂದು ಮುಗ್ಧ ಜನರನ್ನು ನಂಬಿಸಿದ್ದರು ಎಂದು ದೂರುದಾರ ತಿಳಿಸಿದ್ದಾರೆ.
ಜನರಿಂದ 6500 ಕಟ್ಟಿಸಿಕೊಂಡು ಆ ಹಣಕ್ಕೆ ಒಂದು ಮಿಕ್ಸರ್, ದೋಸೆ ತವಾ, ಕುಕ್ಕರ್ ಮತ್ತು ಹರಿವಾಣವನ್ನು ನೀಡಿದ್ದರು. ಹೊನ್ನಾಳಿಯಲ್ಲಿ ಡ್ರಾ ನಡೆಯಲಿದೆ ಬನ್ನಿ ಎಂದಿದ್ದರು.
ಅದರಂತೆ ಸಾರ್ವಜನಿಕರು ಜ.6 ರಂದು ಲಾಟರಿ ಚೀಟಿಯನ್ನು ಹೊನ್ನಾಳಿ ಪಾಂಡುರಂಗಪ್ಪ ಮೆಟಲ್ ಸ್ಟೋರ್‌ಗೆ ತಂದು ತೋರಿಸಿದಾಗ ಅವರು ಈ ಲಾಟರಿ ಚೀಟಿಗೂ ನಮಗೂ ಸಂಬಂಧವಿಲ್ಲ. ನಾವು ಈ ರೀತಿ ಯಾವುದೇ ಲಾಟರಿ ಇಟ್ಟಿಲ್ಲ. ಇದೇ ರೀತಿ ಕಳೆದ ಎಡ್ಮೂರು ದಿನದಿಂದ ಜನ ಬಂದು ವಿಚಾರಿಸುತ್ತಿದ್ದಾರೆ ಎಂದಿದ್ದಾರೆ. ಆಗ ಇದೊಂದು ವಂಚನೆ ಗ್ಯಾಂಗ್ ಎಂದು ತಿಳಿದು ದೂರು ನೀಡಿದ್ದಾರೆ. ಈ ಕೂಡಲೇ ವಂಚಕರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಆಗ್ರಹಿದ್ದಾರೆ.