ದಾವಣಗೆರೆ: ನಕಲಿ ಕೀ ಬಳಸಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕೆ.ಟಿ.ಜೆ. ನಗರ ಪೊಲೀಸರು ಬಂಧನ ಮಾಡಿದ್ದು, ಆರೋಪಿಯಿಂದ 2.80 ಲಕ್ಷ ಬೆಲೆಯ ಚಿನ್ನಾಭರಣ, ನಗದು ವಶಕ್ಕೆ ಪಡೆಯಲಾಗಿದೆ.
ಆರೋಪಿಯಿಂದ ಒಟ್ಟು 2,80,000/-ರೂ ಬೆಲೆಯ 1) 20 ಗ್ರಾಂ. ತೂಕದ ಬಂಗಾರದ ಕೊರಳ ಚೈನ್ 2) 25 ಗ್ರಾಂ. ತೂಕದ ಬಂಗಾರದ ಕೈ ಕಡಗ ಮತ್ತು 3) 30,000/- ರೂ ನಗದು ಹಾಗೂ ಕೃತ್ಯಕ್ಕೆ ಬಳಸಿದ ಮನೆಯ ನಕಲು ಕೀ ವಶಪಡಿಸಿಕೊಳ್ಳಲಾಗಿದೆ.
ದಾವಣಗೆರೆ ನಗರದ ಜಯನಗರ ‘ಬಿ’ ಬ್ಲಾಕ್ ಟವರ್ ಲೇ ಔಟ್ ವಾಸಿಯಾದ ಪ ಅಜ್ಜಪ್ಪ ಎಸ್ ತಮ್ಮ ಮನೆಗೆ ಲಾಕ್ ಮಾಡಿಕೊಂಡು ತಮ್ಮ ಸಂಬಂಧಿಕರ ಮದುವೆಗೆ ಹೊಳಲ್ಕೆರೆಗೆ ಹೋದ ಸಮಯದಲ್ಲಿ ದಿನಾಂಕ:ಡಿ. 23ರಿಂದ ಡಿ.26ರ ಮಧ್ಯದ ಅವಧಿಯಲ್ಲಿ ಮನೆಯ ಇಂಟರ್ ಲಾಕ್ ಓಪನ್ ಮಾಡಿ ಕೊಂಡು ಮನೆಯೊಳಗೆ ಪ್ರವೇಶ ಮಾಡಿ ಮನೆಯ ವಾಲ್ ಡ್ರೂಪ್ ಡ್ರಾ ನಲ್ಲಿಟ್ಟಿದ್ದ ಪಿರ್ಯಾದಿಯವರ ಬಾಬ್ತು 52000/- ರೂ ನಗದು ಹಣ ಮತ್ತು ಒಟ್ಟು ಸುಮಾರು 2,80,000/-ರೂ ಬೆಲೆಯ ಸುಮಾರು 45 ಗ್ರಾಂ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಕೆ.ಟಿ.ಜೆ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದಲ್ಲಿ ಆರೋಪಿ ಹಾಗು ಮಾಲು ಪತ್ತೆಗಾಗಿ ಎಎಸ್ಪಿ ವಿಜಯಕುಮಾರ್ ಎಂ.ಸಂತೋ಼ಷ್ ಮತ್ತು ಮಂಜುನಾಥ್. ಜಿ. ಹಾಗೂ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್.ಹೆಚ್.ಎಸ್.ನೇತೃತ್ವದಲ್ಲಿ ಪಿ.ಎಸ್.ಐ ಲತಾ.ಆರ್ ಹಾಗೂ ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಸಿದ್ದಪ್ಪ, ಶ್ರೀಮತಿ ಗೀತಾ.ಸಿ.ಕೆ. ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಗಳು ಮತ್ತು ಶ್ವಾನದಳ ತಂಡದವರುಗಳನ್ನೊಳಗೊಂಡ ತಂಡವು ಕಾರ್ಯಚರಣೆ ಕೈಗೊಂಡಿದ್ದರು.
ದಿನಾಂಕ:30.12.2024 ರಂದು ಮೇಲ್ಕಂಡ ಪ್ರಕರಣದಲ್ಲಿನ ಆರೋಪಿ ನಂದೀಶ (32) ಜಯನಗರ 2ನೇ ಹಂತ, ಟವರ್ ಲೇ ಔಟ್, ದಾವಣಗೆರೆ. ಈತನನ್ನು ವಶಕ್ಕೆ ಪಡೆದುಕೊಂಡು ಕೂಲಂಕುಷವಾಗಿ ವಿಚಾರಣೆ ಮಾಡಿ ಆರೋಪಿತನು ಕಳ್ಳತನ ಮಾಡಿಕೊಂಡು ಹೋಗಿದ್ದ ಒಟ್ಟು 2,80,000/-ರೂ ಬೆಲೆಯ 1) 20 ಗ್ರಾಂ. ತೂಕದ ಬಂಗಾರದ ಕೊರಳ ಚೈನ್ 2) 25 ಗ್ರಾಂ. ತೂಕದ ಬಂಗಾರದ ಕೈ ಕಡಗ ಮತ್ತು 3) 30,000/- ರೂ ನಗದು ಹಾಗೂ ಕೃತ್ಯಕ್ಕೆ ಬಳಸಿದ ಪಿರ್ಯಾದಿಯವರ ಮನೆಯ ನಕಲು ಕೀ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಎಸ್ಪಿ ಉಮಾಪ್ರಶಾಂತ್ ಶ್ಲಾಘಿಸಿದ್ದಾರೆ.



