ದಾವಣಗೆರೆ: ಜಿಲ್ಲೆಯ ನ್ಯಾಮತಿ ಹರಮಘಟ್ಟ ರಾಜ್ಯ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಪ್ರವೇಶ ಪಡೆದು ಕಾಡುಪ್ರಾಣಿ ಬೇಟೆಯಾಡಲು ಜೀವಂತ ನಾಡಮದ್ದು ಗುಂಡು ಅಳವಡಿಸಲು ಯತ್ನಿಸಿದ ಗ್ಯಾಂಗ್ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅರಣ್ಯ ಅಧಿಕಾರಿಗಳನ್ನು ನೋಡುತ್ತಿದ್ದಂತೆ 4 ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳು ಬಿಟ್ಟು ಹೋದ ಬೈಕ್, 32 ಜೀವಂತ ನಾಡಮದ್ದು ಗುಂಡು ವಶಪಡಿಸಿಕೊಳ್ಳಲಾಗಿದೆ.
ಫಲವನಹಳ್ಳಿ ಗ್ರಾಮದ ಹರಮಘಟ್ಟ ರಾಜ್ಯ ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗಸ್ತು ಮಾಡುವಾಗ ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿದ್ದ ನಾಲ್ವರು ಎರಡು ಬೈಕ್‌ನಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಅವರನ್ನು ಹಿಡಿಯಲು ಯತ್ನಿಸಿದಾಗ ಬೈಕ್ ಬಿಟ್ಟು ಪರಾರಿಯಾಗಿದ್ದರು. ಬೈಕ್ ಬಳಿ ಹೋಗಿ ಪರಿಶೀಲಿಸಿದಾಗ 32 ನಾಡಮದ್ದುಗಳು ಪತ್ತೆಯಾಗಿವೆ.ನಾಲ್ವರು ಆರೋಪಿಗಳಲ್ಲಿ ಇಬ್ಬರ ಗುರುತನ್ನು ಪತ್ತೆಹಚ್ಚಲಾಗಿದೆ. ತಾಲ್ಲೂಕಿನ ಮಾದಾಪುರ ಗ್ರಾಮದ ತಿಮ್ಮಪ್ಪ ಮತ್ತು ಗುಡ್ಡಪ್ಪ ಜತೆಗೆ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಹೊನ್ನಾಳಿ ವಲಯ ನ್ಯಾಮತಿ ಶಾಖೆಯ ಉಪವಲಯ ಅರಣ್ಯಾಧಿಕಾರಿ ಬರ್ಕತ್ ಅಲಿ, ಗಸ್ತು ಅರಣ್ಯ ಪಾಲಕರಾದ ಅಂಜಲಿ ಎಚ್.ಬಿ. ಮತ್ತು ಕ್ಷೇಮಾಭಿವೃದ್ದಿ ಅರಣ್ಯ ವೀಕ್ಷಕ ಎಂ.ಪಿ.ಬಸವರಾಜಪ್ಪ, ಕಾವಲುಗಾರರಾದ ಸುನೀಲ ಮತ್ತು ಪ್ರವೀಣ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ನ್ಯಾಮತಿ ಠಾಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



