ದಾವಣಗೆರೆ: ಸಂಬಂಧಿಯ ಹೆಸರಿನಲ್ಲಿ ಇನ್ಸೂರೆನ್ಸ್ ಬಾಂಡ್ ಮಾಡಿಸಿ ಹಣದಾಸೆಗಾಗಿ ಉಸುರುಗಟ್ಟಿಸಿ ಕೊಲೆ ಮಾಡಿದ ನಾಲ್ವರನ್ನು ದಾವಣಗೆರೆಯ ಆಜಾದ್ ನಗರ ಪೊಲೀಸರು ಬಂಧಿಸಿದ್ದಾರೆ. ಕೊಲೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದಾವಣಗೆರೆಯ ಬಂಬೂಬಜಾರ್ ನಿವಾಸಿ ಗಣೇಶ (24) ಇನ್ಸೂರೆನ್ಸ್ ಬಾಂಡ್ ಹಣದಾಸೆಗಾಗಿ ಕೊಲೆಯ ಸ್ಕೆಚ್ ಹಾಕಿದ್ದನು. ಅವನ ಜೊತೆ ಹಳೇಚಿಕ್ಕನಹಳ್ಳಿಯ ಅನಿಲ (18), ಶಿವಕುಮಾರ್ (25), ಭಾರತ್ ಕಾಲೋನಿಯ ಮಾರುತಿ (24) ಸೇರಿಕೊಂಡು , ನ. 4 ರಂದು ದಾವಣಗೆರೆಯ ಇಮಾಮ್ ನಗರದ ನಿವಾಸಿ ದುಗ್ಗೇಶಿ (32) ಕೊಲೆ ಮಾಡಿದ್ದರು.
ಕೊಲೆ ಆರೋಪಿ ಗಣೇಶ್ ತನ್ನ ಸಂಬಂಧಿ ದುಗ್ಗೇಶಿ ಹೆಸರಿನಲ್ಲಿ ದಾವಣಗೆರೆಯ ಖಾಸಗಿ ಬ್ಯಾಂಕ್ ನಲ್ಲಿ ಇನ್ಸೂರೆನ್ಸ್ ಮಾಡಿಸಿದ್ದನು. ದುಗ್ಗೇಶಿಯನ್ನು ಕೊಲೆ ಮಾಡಿದರೆ 40 ಲಕ್ಷ ರೂಪಾಯಿ ಇನ್ಸೂರೆನ್ಸ್ ಹಣ ದೊರೆಯುತ್ತದೆ ಎಂದು ಸ್ನೇಹಿತರೊಂದಿಗೆ ಸೇರಿಕೊಂಡು ದುಗ್ಗೇಶಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ಅವನ ಮನೆಗೆ ಬಳಿ ತಂದು ಹಾಕಿದ್ದರು.
ಪ್ರಕರಣ ದಾಖಲಿಸಿಕೊಂಡ ಆಜಾದ್ ನಗರ ಪೊಲೀಸರು ಆರೋಪಿತರ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯ ಕುಮಾರ ಎಂ. ಸಂತೋಷ್, ಜಿ. ಮಂಜುನಾಥ್, ನಗರ ಉಪ ವಿಭಾಗ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗ ದರ್ಶನದಲ್ಲಿ ವೃತ್ತ ನಿರೀಕ್ಷಕ ಆರ್.ಜಿ. ಅಶ್ವಿನ್ ಕುಮಾರ್ ಸಿಬ್ಬಂದಿಗಳ ತಂಡ ಕೃತ್ಯ ನಡೆದ 24 ಗಂಟೆಯೊಳಗೆ ನಾಲ್ವರನ್ನು ಬಂಧಿಸಿ, ಕೃತ್ಯಕ್ಕೆ ಉಪಯೋಗಿಸಿದ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಆರೋಪಿ ಗಣೇಶ್ , ಕೊಲೆ ಮಾಡಿದರೆ ಬಾಂಡ್ ಮೊತ್ತ 40 ಲಕ್ಷ ರೂಪಾಯಿ ತನ್ನಗೇ ಸಿಗುತ್ತದೆ ಎಂದು ಸಗನೇತರ ಜೊತೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ. ಈ ಕಾರ್ಯಚರಣೆ ನಡೆಸಿ 24 ಗಂಟೆಯ ಒಳಗಡೆ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.