ದಾವಣಗೆರೆ: ಹೊನ್ನಾಳಿ ತಾಲ್ಲೂಕು, ಹನಗವಾಡಿ ಗ್ರಾಮದ ಮನೆಯೊಂದರಲ್ಲಿ ಇರಿಸಲಾಗಿದ್ದ ಒಣ ಗಾಂಜಾ ಹಾಗೂ ಆರೋಪಿ ಮನೆಯ ಕೈತೋಟದಲ್ಲಿ ಬೆಳೆಯಲಾಗಿದ್ದ ಹಸಿ ಗಾಂಜಾ ಗಿಡಗಳನ್ನು ಅಬಕಾರಿ ಇಲಾಖೆ ಪತ್ತೆ ಹಚ್ಚಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದಲ್ಲಿ ಅಂದಾಜು ರೂ. 6,500 ಮೌಲ್ಯದ 316 ಗ್ರಾಂ ಒಣಗಾಂಜಾ ಮತ್ತು 332 ಗ್ರಾಂ ಹಸಿ ಗಾಂಜಾ ಸೇರಿ ಒಟ್ಟಾರೆ 648 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಾವಣಗೆರೆ ಜಿಲ್ಲಾ ಅಬಕಾರಿ ಉಪ ಆಯುಕ್ತ ಬಿ. ಶಿವಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಬಕಾರಿ ಜಂಟಿ ಆಯುಕ್ತರು, (ಜಾರಿ ಮತ್ತು ತನಿಖೆ) ಹೊಸಪೇಟೆ ವಿಭಾಗ ಇವರ ನಿರ್ದೇಶನದ ಮೇರೆಗೆ ಮಾ. 06 ರಂದು ದಾವಣಗೆರೆ ಜಿಲ್ಲೆ ಅಬಕಾರಿ ಉಪ ಆಯುಕ್ತ ಬಿ.ಶಿವಪ್ರಸಾದ್ ಮಾರ್ಗದರ್ಶನದಲ್ಲಿ ಹೊನ್ನಾಳಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಎಸ್.ಆರ್ ಮುರುಡೇಶ್ ಇವರ ಸಮಕ್ಷಮದಲ್ಲಿ, ಅಬಕಾರಿ ನಿರೀಕ್ಷಕರಾದ ರಶ್ಮಿ ಕೆ.ಆರ್. ಇವರು ಅಬಕಾರಿ ಉಪ ನಿರೀಕ್ಷಕರಾದ ಎಂ. ಮಂಜಪ್ಪ ಮತ್ತು ಸಿಬ್ಬಂದಿಗಳಾದ ಅಬಕಾರಿ ಪೇದೆ ಎನ್.ಮಂಜುನಾಥ ಮತ್ತು ವಾಹನ ಚಾಲಕ ಇ.ಹೆಚ್ ಷಣ್ಮುಖ ಹಾಗೂ ಪಂಚರೊಂದಿಗೆ ಖಚಿತ ಭಾತ್ಮಿ ಮೇರೆಗೆ ಹೊನ್ನಾಳಿ ತಾಲ್ಲೂಕು, ಹನಗವಾಡಿ ಗ್ರಾಮದ ಎಂ.ಟಿ.ಪರಮೇಶ್ವರಪ್ಪ ಅವರಿಗೆ ಸೇರಿದ ಮನೆ ನಂ.205 ರ ಮೇಲೆ ದಾಳಿ ನಡೆಸಿದ್ದು, ಮನೆಯ ಬಳಿ 316 ಗ್ರಾಂ ಒಣ ಗಾಂಜಾ ಹಾಗೂ ಅವರ ಮನೆಯ ಕೈ ತೋಟದಲ್ಲಿ ವಿವಿಧ ಅಳತೆಯ ಮೊಗ್ಗಿನಿಂದ ಕೂಡಿದ ಬೇರು ಕಾಂಡ ಸಹಿತವಾದ ಒಟ್ಟು 73 ಹಸಿ ಗಾಂಜಾ ಗಿಡಗಳು ಸೇರಿದಂತೆ ಒಟ್ಟು 332 ಗ್ರಾಂ ಜಪ್ತು ಪಡಿಸಿಕೊಂಡು, ಆರೋಪಿಯನ್ನು ವಿಚಾರಿಸಲಾಗಿ ಮಾರಾಟದ ಉದ್ದೇಶಕ್ಕಾಗಿ ಹೊಂದಿರುವುದಾಗಿ ತಿಳಿಸಿರುತ್ತಾನೆ. ಆರೋಪಿಯನ್ನು ದಸ್ತಗಿರಿ ಮಾಡಿ, ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರೋಪಿತ ಎಂ.ಟಿ ಪರಮೇಶ್ವರಪ್ಪ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.