ದಾವಣಗೆರೆ: ನಕಲಿ ದಾಖಲೆ ಸೃಷ್ಠಿಸಿ ಗೃಹ ಸಾಲ ಮಂಜೂರಾತಿ ಮಾಡುವಂತೆ ಫೈನಾನ್ಸ್ ಅಧಿಕಾರಿಯೊಬ್ವರಿಗೆ ಒತ್ತಾಯ ಮಾಡಲಾಗಿದ್ದು, ಸಾಲ ನೀಡಿದ ಅಧಿಕಾರಿ ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದಾರೆ.
ದಾವಣಗೆರೆಯ ಎಲ್‍ಐಸಿ ಹೌಸಿಂಗ್ ಫೈನಾನ್ಸ್ ವ್ಯವಸ್ಥಾಪಕ ಹರಿಹರದ ಶರಣ್ ಕಿಡ್ನಾಪ್ ಆಗಿ ಹಲ್ಲೆಗೊಳಗಾದ ಅಧಿಕಾರಿ. ಹಲ್ಲೆ ಮಾಡಿದ ಆರೋಪದ ಮೇರೆಗೆ ಶಿಕಾರಿಪುರದ ನಾಗರಾಜ್, ನಾಸಿರ್ ಎಂಬುವರನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ.
ಗೃಹಸಾಲದ ಮಂಜೂರು ಮಾಡದ ಕಾರಣಕ್ಕೆ ಎಲ್‍ಐಸಿ ಹೌಸಿಂಗ್ ಫೈನಾನ್ಸ್ ವ್ಯವಸ್ಥಾಪಕ ಶರಣ್ ಎಂಬುವವರನ್ನು ಅಪಹರಿಸಿ ಕೊಲೆಗೆ ಯತ್ನಿಸಿದ್ದರು. ಶಿಕಾರಿಪುರದ ನಾಗರಾಜ್ ಮತ್ತು ನಾಸೀರ್ ಮತ್ತು ಇತರರು ಕುಂದಾಪುರದ ಶೆಟ್ಟಿ ಎಂಬುವವರ ಮೂಲಕ ನಕಲಿ ದಾಖಲೆ ಸೃಷ್ಟಿಸಿ ಹರಿಹರದಲ್ಲಿ ಯಾರದ್ದೋ ಒಂದು ಮನೆ ತೋರಿಸಿ ಲಕ್ಷಾಂತರ ರೂಪಾಯಿ ಸಾಲಕ್ಕೆ ಬೇಡಿಕೆ ಇಟ್ಟಿದ್ದರು.
ಸಾಲಗಾರರು ಕೊಟ್ಟಿರುವ ದಾಖಲೆ ನಕಲಿ ಎಂದು ತಿಳಿದು ಬಂದಿದ್ದರಿಂದ ವ್ಯವಸ್ಥಾಪಕ ಶರಣ್ ಅವರು ಮಂಜೂರಾಗಿದ್ದ ಚೆಕ್ ತಡೆ ಹಿಡಿದಿದ್ದಾರೆ. ಇದರಿಂದ ತೀವ್ರ ಕೋಪಗೊಂಡ ನಾಗರಾಜ್ ಮತ್ತು ನಾಸೀರ್ ಸೇರಿ ಇತರರು, ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮೂರು ಬಾರಿ ಚಾಕುವಿನಿಂದ ಇರಿದು ಹಲ್ಲೆ ನಡೆಸಿ, ಕಿಡ್ನಾಪ್ ಮಾಡಿದರು.
ಈ ಕುರಿತು ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಅಪಹರಣದ ಪ್ರಕರಣ ದೂರು ದಾಖಲಾದ ತಕ್ಷಣ ಕಂಟ್ರೋಲ್ ರೂಂನಿಂದ ಮಾಹಿತಿ ಪಡೆದ ಹೊನ್ನಾಳಿ ಪೊಲೀಸರು ಹೊನ್ನಾಳಿಯ ವಡ್ಡಿನಕೆರೆ ಹಳ್ಳದ ಬಳಿ ಬರುತ್ತಿದ್ದ ಕಾರನ್ನು ಅಡ್ಡಗಟ್ಟಿ ಗಾಯಾಳು ಶರತ್ ಅವರನ್ನು ರಕ್ಷಿಸಿ ಹಲ್ಲೆ ಮಾಡಿದ ನಾಗರಾಜ್, ನಾಸಿರ್ ಅವರನ್ನು ಬಂದಿಸಿದ್ದಾರೆ. ಇವರ ಜೊತೆ ಇದ್ದ ಇನ್ನಿಬ್ಬರು ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.



