ದಾವಣಗೆರೆ: ನಗರದ ಖಾಸಗಿ ಶಾಲೆಯೊಂದಕ್ಕೆ 5 ಲಕ್ಷಕ್ಕೆ ಬೇಡಿಕೆ ಇಟ್ಟು, ಹಣ ಸುಲಿಗೆ ಮಾಡುತ್ತಿದ್ದ ಹಿಂದೂ ಜನ ಜಾಗೃತಿ ಸೇನಾ ಸಮಿತಿ ಅಧ್ಯಕ್ಷನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಿಂದೂ ಜನ ಜಾಗೃತಿ ಸೇನಾ ಸಮಿತಿ ಹೆಸರಿನ ಸಂಘಟನೆಯ ಅಧ್ಯಕ್ಷ ಚೇತನ್ @ ಚೇತನ್ ಕನ್ನಡಿಗನು ತನ್ನ ಸಹಚರರೊಂದಿಗೆ ಸೇರಿಕೊಂಡು ದಾವಣಗೆರೆ ನಗರದ ಕರೂರು ಇಂಡಿಸ್ಟ್ರಿಯಲ್ ಏರಿಯಾದಲ್ಲಿರುವ ಸೈಯದ್ ಅಕ್ಬರ್ ಅಲಿ ಎಂಬುವರಿಗೆ ಸೇರಿದ ಗ್ಲೋಬಲ್ ಪಬ್ಲಿಕ್ ಸ್ಕೂಲ್‌ನ್ನು ಅನಾಧಿಕೃತವಾಗಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆಸುತ್ತಿದ್ದೀರಿ ಎಂದು ಈ ಶಾಲೆಯ ಮೇಲೆ ಶಿಕ್ಷಣ ಇಲಾಖೆಗೆ ಸಲ್ಲಿಸಿದ ದೂರು ಅರ್ಜಿ ಸಲ್ಲಿಸಿದ್ದರು. ಶಾಲೆಯ ವಿರುದ್ಧ ಸಲ್ಲಿಸಿರುವಂತಹ ದೂರುಗಳನ್ನು ನಾವು ಹಿಂಪಡೆಯ 5ಲಕ್ಷ ಹಣ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು.
ನಮ್ಮದೆಲ್ಲಾ ಒಂದು ಟೀಂ ವರ್ಕ್, ಅವರಿಗೆಲ್ಲಾ ಹಂಚಲು ಕನಿಷ್ಟ ಪಕ್ಷ ಅಷ್ಟು ಹಣವಾದರೂ ಬೇಕು ಎಂದು ಬೇಡಿಕೆಯನಯಿಟ್ಟಿದ್ದರು. ಇಲ್ಲವಾದರೆ ಶಾಲೆಯನ್ನು ಮುಚ್ಚಿಸಿ ಬಿಡುತ್ತೇವೆ ಎಂದು ಬೆದರಿಕೆ ಹಾಕಿ ಹಣವನ್ನು ಸುಲಿಗೆ ಮಾಡಿದ್ದರು. ಅಲ್ಲದೆ ಕೇಳಿದಷ್ಟು ಹಣವನ್ನು ಕೊಡದೇ ಇದ್ದಾಗ ಪದೇ ಪದೇ ಗ್ಲೋಬಲ್ ಪಬ್ಲಿಕ್ ಸ್ಕೂಲ್ ಹತ್ತಿರ ಹೋಗಿ ಅಲ್ಲಿಯೂ ಹಣಕ್ಕೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಶಾಲೆ ಮಾಲೀಕ ಸೈಯದ್ ಅಕ್ಬರ್ ಅಲಿ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣವನ್ನು ಎಸ್ಪಿ ಉಮಾ ಪ್ರಶಾಂತ್ ಮತ್ತು ಹೆಚ್ಚುವರಿ ಎಸ್ಪಿ ವಿಜಯಕುಮಾರ್.ಎಂ ಸಂತೋಷ, ಜಿ.ಮಂಜುನಾಥ್ ಮತ್ತು ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿಮಾರ್ಗದರ್ಶನದಲ್ಲಿ ಆಜಾದ್ ನಗರ (ಗಾಂಧಿನಗರ) ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ನಹೀಂ ಅಹಮದ್.ಟಿ.ಆರ್ ಹಾಗೂ ಸಿಬ್ಬಂದಿ ಫೆ.17 ರಂದು ಪ್ರಕರಣದ ಪ್ರಮುಖ ಆರೋಪಿತನಾದ ಚೇತನ್.ಜಿ @ ಚೇತನ್ ಕನ್ನಡಿಗ, 28 ವರ್ಷ, ಕೆ.ಟಿ.ಜೆ ನಗರ ದಾವಣಗೆರೆ ಈತನನ್ನು ಬಂಧಿಸಲಾಗಿದೆ.
ಆರೋಪಿಯಿಂದ ಕೃತ್ಯ ಬಳಸಿದ 15 ಸಾವಿರ ಬೆಲೆ ಬಾಳುವ ಮೊಬೈಲ್, ಸ್ಕೂಟರ್ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಆರೋಪಿತನು ಇದೆ ರೀತಿ ಇತರೇ ಕಡೆಗಳಲ್ಲಿ ಭಾಗಿಯಾಗಿರುವ ಬಗ್ಗೆ ಇನ್ನೂ ತನಿಖೆ ಮುಂದುವರೆದಿರುತ್ತದೆ.
ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ನಹೀಂ ಅಹಮದ್.ಟಿ.ಆರ್, ಆಜಾದ್ ನಗರ(ಗಾಂಧಿನಗರ)ವೃತ್ತ ಮತ್ತು ಸಿಬ್ಬಂದಿ ನಿಜಲಿಂಗಪ್ಪ, ಸಿದ್ದೇಶ್, ದ್ಯಾಮೇಶ್, ಶಫಿವುಲ್ಲಾ ಸಿದ್ಧಾಕಲಿ, ನಾಗರಾಜ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.