ದಾವಣಗೆರೆ; ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಕೇಳಿದ ಕಕ್ಕರಗೊಳ್ಳ ಗ್ರಾಮದ ವೃದ್ಧೆಯನ್ನು ಹತ್ಯೆ ಮಾಡಿ, ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ ಅದೇ ಗ್ರಾಮದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 35 ಸಾವಿರ ರೂ. ದಂಡ ವಿಧಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಬಿ.ಜಿ.ರೇವಣಸಿದ್ದಪ್ಪ(48 ವರ್ಷ) ಶಿಕ್ಷೆಗೆ ಗುರಿಯಾದ ಅಪರಾಧಿ. ಅದೇ ಗ್ರಾಮದ ಗೌರಮ್ಮನ ಬಳಿ ಅಪರಾಧಿ ರೇವಣಸಿದ್ದಪ್ಪ 11,800 ಸಾಲ ಪಡೆದಿದ್ದನು. ತಾನು ಕೊಟ್ಟ ಹಣವನ್ನು ಕೇಳಲಾರಂಭಿಸಿದ್ದ ಗೌರಮ್ಮನನ್ನು ಮುಗಿಸಿದರೆ ಸಾಲದ ಹಣವನ್ನೇ ಕೊಡಬೇಕಿಲ್ಲ ಎಂದು ರೇವಣಸಿದ್ದಪ್ಪ ಕೃತ್ಯ ಎಸಗಿದ್ದನು.
ದಿನಾಂಕ 18.7.2921ರಂದು ರಾತ್ರಿ ಗೌರಮ್ಮನನ್ನು ಮನೆಯಲ್ಲೇ ಕೊಲೆ ಮಾಡಿ, ಚಿನ್ನಾಭರಣ ದರೋಡೆ ಮಾಡಿಕೊಂಡು, ಪರಾರಿಯಾಗಿದ್ದನು. ಚಿನ್ನ ದರೋಡೆ ಮಾಡಿದವರು ಕೊಲೆ ಮಾಡಿದ್ದಾರೆಂದು ಬಿಂಬಿಸಿದ್ದನು. ಈ ಬಗ್ಗೆ ಮೃತರ ಪುತ್ರ ಕರಿಬಸಪ್ಪ ಎನ್.ಮುದೇಗೌಡ್ರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಆಗಿನ ಗ್ರಾಮಾಂತರ ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು ಕಕ್ಕರಗೊಳ್ಳ ಗ್ರಾಮದ ಗೌರಮ್ಮನ ಹತ್ಯೆ ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರವೀಣಕುಮಾರ ತಾಲೂಕಿನ ಕಕ್ಕರ ಗೊಳ್ಳದ ಆರೋಪಿ ರೇವಣಸಿದ್ದಪ್ಪನ ವಿರುದ್ಧದ ಆರೋಪ ಸಾಬೀತಾಗಿದ್ದರಿಂದ ಆತನಿಗೆ ಜೀವಾವಧಿ ಶಿಕ್ಷೆ ಹಾಗೂ 35 ಸಾವಿರ ದಂಡ ವಿಧಿಸಿ, ತೀರ್ಪು ನೀಡಿದರು.
ಸರ್ಕಾರದ ಪರ ವಕೀಲ ಜಯಪ್ಪ ವಾದ ಮಂಡಿಸಿದ್ದರು. ಪ್ರಕರಣದ ತನಿಖೆ ನಡೆಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದ ತನಿಖಾಧಿಕಾರಿ ಲಿಂಗನಗೌಡ ನೆಗಳೂರು, ಸರ್ಕಾರದ ಪರ ವಾದ ಮಂಡಿಸಿದ್ದ ಜಯಪ್ಪಅವರನ್ನು ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿಗಳಾದ ವಿಜಯಕುಮಾರ ಎಂ. ಸಂತೋಷ್, ಜಿ.ಮಂಜುನಾಥ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.