ದಾವಣಗೆರೆ: ಹೊನ್ನಾಳಿ ಪಟ್ಟಣದಲ್ಲಿ ಒಂದೇ ದಿನ ಎರಡು ಕಡೆಗಳಲ್ಲಿ ಚಿನ್ನದ ಸರಗಳ್ಳತನ ಪ್ರಕರಣ ದಾಖಲಾಗಿದೆ.ಪಟ್ಟಣದ ದುರ್ಗಿಗುಡಿ ಸರ್ಕಲ್‌ನ ಮೂರನೇ ಕ್ರಾಸ್‌ನ ನಿವಾಸಿ ಮಧು ಎಂಬ ಯುವತಿ ಕೊರಳಲಿದ್ದ ಸುಮಾರು 60 ಸಾವಿರ ಮೌಲ್ಯದ 12 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನೆ ಸಮೀಪವೇ ಈ ಕೃತ್ಯ ನಡೆದಿದೆ.
ಮತ್ತೊಂದು ಪ್ರಕರಣದಲ್ಲಿ ತಾಲ್ಲೂಕಿನ ಹಿರೇಮಠದ ಗ್ರಾಮದ ಯಶೋಧಮ್ಮ ಎಂಬವರ ಕೊರಳಿನಲ್ಲಿದ್ದ 50 ಗ್ರಾಂ ತೂಕದ ಕ2.5 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ಬೈಕ್‌ನಲ್ಲಿ ಬಂದ ಕಿಡಿಗೇಡಿಗಳು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಎರಡು ಒಂದೇ ದಿನ ಘಟನೆ ನಡೆದಿದ್ದು, ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಅಪರಿಚಿತರು ತಿರುಗಾಡುತ್ತಿದ್ದರೆ ಕೂಡಲೇ ಪೊಲೀಸ್ ಠಾಣೆಗೆ ವಿಷಯ ತಿಳಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.



