ದಾವಣಗೆರೆ; ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವಕನ ಪೋಷಕರ ಮೇಲೆ ಯುವತಿಯ ಸಂಬಂಧಿಕರು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಜಿಲ್ಲೆಯ ಹರಿಹರ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕಮಲಾಪುರ ಗ್ರಾಮದ ಯುವಕನ ಪೋಷಕರಾದ ಆರುಂಡಿ ಬಸಪ್ಪ ಹಾಗೂ ಪತ್ನಿ ಮಲ್ಲಮ್ಮನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪುರದ ಸಿದ್ದಾರ್ಥ ಹಾಗು ಸೃಷ್ಟಿ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೇಮಿಗಳಿಗೆ ಮದುವೆಯಾಗಲು ಇಬ್ಬರ ಜಾತಿ ಅಡ್ಡಿಯಾಗಿತ್ತು. ಮದುವೆಗೆ ಯುವತಿಯ ಪೋಷಕರು ವಿರೋಧಿಸಿದ್ದರು. ಕಳೆದ 20 ದಿನಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಬಳಿಕ ಸಬ್ ರಿಜಿಸ್ಟರ್ ನಲ್ಲಿ ಆಫೀಸ್ ನಲ್ಲಿ ನೋಂದಣಿ ಮಾಡಿಸಿದ್ದರು.
ಯುವತಿ ಬೇರೆ ಜಾತಿ ಯುವಕನೊಂದಿಗೆ ಮದುವೆಯಾಗಿದ್ದಕ್ಕೆ ಹುಡುಗನ ಮನೆಗೆ ನುಗ್ಗಿದ್ದ ಯುವತಿ ಪೋಷಕರು, ಸಿದ್ಧಾರ್ಥ ತಂದೆ ಆರುಂಡಿ ಬಸಪ್ಪ, ಪತ್ನಿ ಮಲ್ಲಮ್ಮನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಜಾತಿ ಬೇರೆ ಬೇರೆ ಎಂಬ ಕಾರಣಕ್ಕೆ ಹಲ್ಲೆ ನಡೆದಿದೆ.ಆರುಂಡಿ ಬಸಪ್ಪನ ಮೈಮೇಲಿನ ಬಟ್ಟೆ ಹರಿದು ಅಮಾನುಷವಾಗಿ ಥಳಿಸಲಾಗಿದೆ. ತೀವ್ರ ಗಾಯಗೊಂಡಿರುವ ಬಸಪ್ಪನಿಗೆ ದಾವಣಗೆರೆ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



