ದಾವಣಗೆರೆ: ರಾತ್ರಿ ವೇಳೆ ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಎಲ್ ಇಡಿ ಟಿವಿ, ಬಂಗಾರ, ಬೆಳ್ಳಿ ಸೇರಿ ಆರೋಪಿಗಳಿಂದ ಒಟ್ಟು 03,47,000 ರೂ.ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
ದಾವಣಗೆರೆ ತಾಲ್ಲೂಕಿನ ಮಲ್ಲಾಪುರ ಗಾಮದ ಚೇತನ್ ಕುಮಾರ್ ಎಂಬುವವರು ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಬೀಗ ಮುರಿದು ನಮ್ಮ ಮನೆಯಲ್ಲಿದ್ದ 43 ಇಂಚಿನ ಎಲ್.ಇ.ಡಿ ಟಿವಿ ಹಾಗೂ ಬೆಂಡೋಲೆ ಮೂಗುಬೊಟ್ಟು, ಕೆನೆ ಸರಪಣಿ ಹಾಗ ಒಂದು ಜೊತೆ ಬೆಳ್ಳಿ ಕಾಲು ಚೈನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಎಸ್ಪಿ ಉಮಾ ಪ್ರಶಾಂತ್, ಡಿವೈಎಸ್ಪಿ ಬಸವರಾಜ ಮಾರ್ಗದರ್ಶನದಲ್ಲಿ ದಾವಣಗೆರೆ ಗ್ರಾಮಾಂತರ ಠಾಣೆಯ ಪಿ.ಐ ಕಿರಣ್ ಕುಮಾರ್ ಇ.ವೈ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಕಚೇರಿ ಮಂಜುನಾಥ ಎಸ್. ಕಲ್ಲದೇವರ, ಪಿಎಸ್‌ಐ ಹಾರೂನ್ ಅಕ್ತರ್ ಹಾಗೂ ಜೋವಿತ್ ರಾಜ್ ಮತ್ತು ಠಾಣಾ ಸಿಬ್ಬಂದಿಯವರಾದ ದೇವೇಂದ್ರನಾಯ್ಕ, ಅಣ್ಣಯ್ಯ, ಮಹಮ್ಮದ್ ಯುಸುಫ್ ಅತ್ತರ್, ವೀರೇಶ ರವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸಿದೆ.
ಪ್ರಕರಣದ ಆರೋಪಿಗಳಾದ 1)ಮಹಮ್ಮದ್ ಸಲೀಂ (23), ವಾಸ:ಮಂಡಕ್ಕಿ ಭಟ್ಟಿ ಲೇ ಔಟ್, ದಾವಣಗೆರೆ, ಸ್ವಂತ ಊರು: ರಾಣೆಬೆನ್ನೂರು ಟೌನ್, 2)ಸೈಯದ್ ಶೇರು (27) ವಾಸ: ಎಸ್.ಜೆ.ಎಂ ನಗರ, ದಾವಣಗೆರೆ ಇವರುಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕಳುವಾಗಿದ್ದ 57,000/- ರೂ ಮೌಲ್ಯದ ಒಂದು ಎಲ್ ಇಡಿ ಟಿವಿ, ಬಂಗಾರದ ಬೆಂಡೋಲೆ, ಮೂಗು ಬೊಟ್ಟು, ಕೆನೆ ಸರಪಣಿ, ಬೆಳ್ಳಿಯ ಕಾಲು ಚೈನ್ ಅಮಾನತ್ತು ಪಡಿಸಿಕೊಂಡಿದ್ದು ಇದರ ಜೊತೆಗೆ ಮತ್ತೊಂದು ಪ್ರಕರಣದ ಪ್ರಕರಣವು ಕೂಡ ಪತ್ತೆಯಾಗಿದ್ದು, ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ 2,50,000/- ರೂ ಬೆಲೆಯ 44 ಗ್ರಾಂ ಚಿನ್ನದ ಗಟ್ಟಿ ಹಾಗೂ ಕೃತ್ಯಕ್ಕೆ ಬಳಸಿದ್ದ 40,000/- ರೂ ಬೆಲೆಯ ಒಂದು ಬೈಕ್, ಎಲ್ಲಾ ಸೇರಿ ಒಟ್ಟು 03,47,000/- ರೂ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆರೋಪಿತರ ಹಿನ್ನೆಲೆ: ಆರೋಪಿ 1)ಮಹಮ್ಮದ್ ಸಲೀಂ ಮೇಲೆ ದಾವಣಗೆರೆ ಗಾಂಧಿನಗರ ಪೊಲೀಸ್ ಠಾಣೆ, ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿರುತ್ತಾರೆ 2)ಸೈಯದ್ ಶೇರು ವಿರುದ್ಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಹುಬ್ಬಳ್ಳಿ ರೆಲ್ವೇಸ್ ನಲ್ಲಿ ಪ್ರಕರಣಗಳು ದಾಖಲಾಗಿದೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾಪ್ರಶಾಂತ್, ಹೆಚ್ಚುವರಿ ವಿಜಯಕುಮಾರ್ ಎಂ ಸಂತೋಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



