ದಾವಣಗೆರೆ: ಮದುವೆ ಚೌಟ್ರಿಯಲ್ಲಿ ಕಳ್ಳತನ ಮಾಡುತ್ತಿದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಪತ್ತೆ ಮಾಡಿದ್ದು, ಬಾಲಕನಿಂದ ಕಳ್ಳತನ ಮಾಡಿದ್ದ ಒಟ್ಟು 1,40,000 ರೂ. ಬೆಲೆ ಬಾಳುವ 23 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಶಿವಗಂಗ ಗ್ರಾಮದ ಶ್ವೇತಾ ಎಂ.ಆರ್ ಎಂಬುವವರು ದಾವಣಗೆರೆಯ ಶ್ಯಾಮನೂರು ಜಯದೇವಪ್ಪ ಕಲ್ಯಾಣ ಮಂಟಪಕ್ಕೆ ಮದುವೆಗೆ ಚಿನ್ನಾಭರಣವಿದ್ದ ಬ್ಯಾಗ್ ರೂಮ್ ನಲ್ಲಿ ಇಟ್ಟು ಬೀಗ ಹಾಕಿಕೊಂಡು ಹೊರ ಬಂದಿದ್ದರು. ನನ್ನ ಮಗಳಾದ ಅಪೂರ್ವ ಹೆಚ್.ಡಿ ಕೊಠಡಿಗೆ ಹೋದಾಗ, ಬಾಗಿಲಿನ ಬೀಗವನ್ನು ಹೊಡೆದು ಎಲ್ಲಾ ಬ್ಯಾಗ್ ಗಳು ಚೆಲ್ಲಾಪಿಲ್ಲಿಯಾಗಿದ್ದವು. ಬ್ಯಾಗ್ ನಲ್ಲಿದ್ದ 10 ಗ್ರಾಂ ಬಂಗಾರದ ಪೆಂಡೆಂಟ್, 18 ಗ್ರಾಂ ಬಂಗಾರದ ಸರ, 12 ಗ್ರಾಂ ಬಂಗಾರದ ಕಿವಿ ಓಲೆ ಒಟ್ಟಾರೆ 40 ಗ್ರಾಂ ಬಂಗಾರದ ಒಡವೆಗಳು ಸೇರಿ ಅಂದಾಜು ರೂ 200000/- ಬೆಲೆಯ ಒಡವೆಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರನ್ನು ವಿದ್ಯಾನಗರ ಪೊಲೀಸ್ ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಲು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಭಾವತಿ.ಸಿ.ಶೇತಸನದಿ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣಾ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಿಸಲಾಗಿತ್ತು.
ಈ ತಂಡ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಪತ್ತೆ ಮಾಡಿ ಕಳ್ಳತನ ಮಾಡಿದ್ದ ಒಟ್ಟು 1,40,000/- ಬೆಲೆ ಬಾಳುವ 23 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದು, ವಿದ್ಯಾನಗರ ಪೊಲೀಸ್ ಠಾಣೆಯ 02 ಪ್ರಕರಣಗಳು ಪತ್ತೆಯಾಗಿರುತ್ತವೆ. ಕಾರ್ಯಾಚರಣೆ ನಡೆಸಿದ ತಂಡವನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ ಸಂತೋಷ್ ಹಾಗೂ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.



