ದಾವಣಗೆರೆ: ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತು ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್ ಎಸ್ ಎಂ ನಗರದ ಖಬರಸ್ಥಾನದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಮಹಮ್ಮದ್ ಶಾಹೀದ್ (24) ಯಾವುದೋ ಮಾದಕ ವಸ್ತುವನ್ನು ಸೇವನೆ ಮಾಡಿ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿದ್ದನು.ಇನ್ನೊಂದು ಪ್ರಕರಣದಲ್ಲಿ ಎಸ್ ಎಸ್ ಎಂ ನಗರದ ಆಲ್-ಇಖ್ರಾ ಶಾಲೆಯ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಅಬು ಸಾಲೇಹಾ ಅಲಿಯಾಸ್ ಅಬ್ಬು (25) ಸಹ ಯಾವುದೋ ಮಾದಕ ವಸ್ತುವನ್ನು ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದನು. ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿದ್ದ. ಇಬ್ಬರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿದ್ದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದಲ್ಲದೆ, ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿಟುವಳ್ಳಿ ಇಎಸ್ಐ ಆಸ್ಪತ್ರೆಯ ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಸರಸ್ವತಿ ನಗರದ ನಂದೀಶ್ (20) ಯಾವುದೋ ಅಮಲು ಪದಾರ್ಥ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತನೆ ಮಾಡುತ್ತಿದ್ದ. ಈತನನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಎಂಬ ಮಾದಕ ವಸ್ತುವನ್ನು ಸೇವಿಸಿರುವುದಾಗಿ ದೃಢಪಟ್ಟಿದೆ. ಈತನ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಪೊಲೀಸ್ ಅಧೀಕ್ಷಕರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ನಗರ ಪೊಲೀಸ್ ಉಪಾಧೀಕ್ಷಕರವರ ಮಾರ್ಗದರ್ಶನದಲ್ಲಿ ಆಜಾದ್ ನಗರ ಮತ್ತು ಕೆಟಿಜೆ ನಗರ ಪೊಲೀಸ್ ನಿರೀಕ್ಷಕರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿ, ಸಿಬ್ಬಂದಿ ತಂಡಗಳನ್ನು ರಚಿಸಿ ಗಾಂಜಾ ಮಾರಾಟ ಹಾಗೂ ಗಾಂಜಾ ಬಳಕೆ ಮಾಡುವವರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ಪ್ರಕರಣಗಳಲ್ಲಿ ಕಾರ್ಯಾಚರಣೆ ಕೈಗೊಂಡು ಮಾದಕ ವ್ಯಸನಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡ ಅಧಿಕಾರಿ, ಸಿಬ್ಬಂದಿಯನ್ನು ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ವಿಜಯ ಕುಮಾರ ಎಂ. ಸಂತೋಷ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



