ದಾವಣಗೆರೆ; ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 14 ಲಕ್ಷ ರೂ. ಬೆಲೆಯ ಒಟ್ಟು 7 ಟ್ರ್ಯಾಕ್ಟರ್ ಟ್ರಾಲಿ, ಒಂದು ತೇಗದ ಮರ ಕಳ್ಳತನ ಪ್ರಕರಣವನ್ನು ಭೇದಿಸಿದ್ದಾರೆ. ಐವರು ಆರೋಪಿಗಳಲ್ಲಿ ಇಬ್ಬರು ಅಂತರ್ ಜಿಲ್ಲಾ ಆರೋಪಿಗಳ ಬಂಧನವಾಗಿದೆ. ಪ್ರಕರಣಕ್ಕೆ ಸಂಬಂಧ 35 ಸಾವಿರ ನಗದು ಹಣವನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಜಮೀನಿನಲ್ಲಿ ಕೆಲಸ ಮುಗಿಸಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಳ್ಳಲು ಎಸ್ ಪಿ ಉಮಾ ಪ್ರಶಾಂತ, ಹೆಚ್ಚುವರಿ ಎಸ್ ಪಿ ವಿಜಯಕುಮಾರ್ ಎಂ ಸಂತೋಷ ಮತ್ತು ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ ಪಿ ಬಿ.ಎಸ್ ಬಸವರಾಜ್ ಮಾರ್ಗದರ್ಶನದಲ್ಲಿ ಹಾಗೂ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಪಿಎಸ್ ಐ ನೇತೃತ್ವದಲ್ಲಿ ಆರೋಪಿತರ ಪತ್ತೆಗಾಗಿ ತಂಡ ರಚಿಸಲಾಗಿತ್ತು.
ಮಲೇಬೆನ್ನೂರು ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಭು ಡಿ ಕೆಳಗಿನಮನಿ ಮತ್ತು ಸಿಬ್ಬಂದಿಯವರು 5 ಆರೋಪಿತರ ಪೈಕಿ 1) ಮನೋಜ್ (23) ಡ್ರೈವರ್ , ಕೊಮ್ಮನಹಾಳ್ ಗ್ರಾಮ ಶಿವಮೊಗ್ಗ , 2) ಮಧು (21), ಡ್ರೈವರ್ ಕೆಲಸ ವಾಸ ಕೊಮ್ಮನಹಾಳ್ ಗ್ರಾಮ ಶಿವಮೊಗ್ಗ ಇವರನ್ನು ಬಂಧಿಸಲಾಗಿದೆ. ಮಲೇಬೆನ್ನೂರು ಪೊಲೀಸ್ ಠಾಣೆಯ 2 ಟ್ರಾಲಿ ಕಳ್ಳತನ ಪ್ರಕರಣಗಳು, ಮತ್ತು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ 1 ಟ್ರಾಲಿ ಕಳ್ಳತನ ಪ್ರಕರಣ, ನ್ಯಾಮತಿ ಪೊಲೀಸ್ ಠಾಣೆಯ 2 ಟ್ರಾಲಿ ಕಳ್ಳತನ ಪ್ರಕರಣಗಳು ಹಾಗೂ ಹೊನ್ನಾಳಿ ಪೊಲೀಸ್ ಠಾಣೆಯ 2 ಟ್ರಾಲಿ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ, 14,000,00 ರೂ. ಬೆಲೆಯ ಒಟ್ಟು7 ಟ್ರಾಲಿ ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ನ್ಯಾಮತಿ ಪೊಲೀಸ್ ಠಾಣೆಯ 1 ತೇಗದ ಮರ ಕಳ್ಳತನ ಪ್ರಕರಣವನ್ನು ಭೇದಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ35 ಸಾವಿರ ನಗದು ಹಣವನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.



