ದಾವಣಗೆರೆ: ಪ್ರಿಯಕರನ ಜತೆ ಸೇರಿ ಗಂಡನನ್ನೇ ಕೊಂದು, ಗೋಡೆ ಮೇಲಿನಿಂದ ಬಿದ್ದು ತನ್ನ ಗಂಡ ಸಾವು ಎಂದವಳು ಪ್ರಿಯಕರನ ಜೊತೆ ಕಂಬಿ ಎಣಿಸುವಂತಾಗಿದೆ. ಹದಡಿ ಪೊಲೀಸರು ದಾವಣಗೆರೆ ತಾಲೂಕಿನ ದುರ್ಗಾಂಬಿಕಾ ಕ್ಯಾಂಪ್ ನಿವಾಸಿ ಕಾವ್ಯ ಮತ್ತು ಆಕೆಯ ಪ್ರಿಯಕರ ದಾವಣಗೆರೆಯ ವಿನೋಬ ನಗರದ ನಾಲ್ಕನೇ ಮುಖ್ಯ ರಸ್ತೆ ಏಳನೇ ಕ್ರಾಸ್ ನಿವಾಸಿ ಬೀರೇಶ್ (24) ಬಂಧಿಸಿದ್ದಾರೆ. ಜೂ. 9 ರಂದು ಹಳೆ ಬಿಸಲೇರಿ ಗ್ರಾಮದಲ್ಲಿ ಲಿಂಗರಾಜ್ ಎಂಬಾತ ಗೋಡೆ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದು, ಅವನ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು. ಲಿಂಗರಾಜ್ ನನ್ನು ಕೊಲೆ ಮಾಡಲಾಗಿದೆ ಎಂದು ತಂದೆ-ತಾಯಿ ದೂರು ಸಲ್ಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೀರೇಶ್ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅವನು ನೀಡಿದ ಸುಳಿವಿನ ಆಧಾರದಲ್ಲಿ ಕೊಲೆಗೀಡಾದ ಲಿಂಗರಾಜ್ ಪತ್ನಿ ಕಾವ್ಯಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಕಾವ್ಯ ಮತ್ತು ಬೀರೇಶ್ ಅನೈತಿಕ ಸಂಬಂಧ ಹೊಂದಿದ್ದರು. ಕೆಲ ದಿನಗಳ ಹಿಂದೆ ಇಬ್ಬರೂ ಮಂಗಳೂರಿಗೆ ಹೋಗಿದ್ದರು. ನಂತರ ಕಾವ್ಯ ಪತಿಯೊಡನೆ ಜೀವನ ನಡೆಸುತ್ತಿದ್ದಳು. ಆ ನಡುವೆಯೂ ಬೀರೇಶ್ ಜೊತೆಗೆ ಸಂಬಂಧ ಮುಂದುವರೆಸಿದ್ದಳು.ತಮ್ಮ ಸಂಬಂಧಕ್ಕೆ ಗಂಡನೇ ಅಡ್ಡಿ ಆಗುತ್ತಿದ್ದಾನೆ ಎಂದು ಪ್ರಿಯಕರ ಜೊತೆಗೂಡಿ ಕೊಲೆ ಮಾಡಿದ್ದಳು. ಗೋಡೆ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದಿದ್ದಳು.