ದಾವಣಗೆರೆ: ನಿಧಿ ಆಸೆಗಾಗಿ ಪತ್ನಿಯನ್ನೇ ಕೊಂದಿದ್ದ ವೈದ್ಯ, ಇದೀಗ ಕಂಬಿ ಎಣಿಸುವಂತಾಗಿದೆ. ನಿಧಿಗಾಗಿ 9 ತಿಂಗಳ ಹಿಂದೆ ಪತ್ನಿಯನ್ನು ಕೊಂದು, ಲೋ ಬಿಪಿ ಎಂದು ನಂಬಿಸಿದ್ದ ವೈದ್ಯನ ಸಂಚು ಈಗ ಬಟಾಬಯಲಾಗಿದೆ.
ಜಿಲ್ಲೆಯ ನ್ಯಾಮತಿ ತಾಲೂಕಿನ ರಾಮೇಶ್ವರದಲ್ಲಿ ಈ ಘಟನೆ ನಡೆದಿದ್ದು, ಇದೀಗ ಎಫ್‌ಎಸ್‌ಎಲ್ ವರದಿ ಬಂದಿದ್ದು, ರಿಪೋರ್ಟ್ ನಲ್ಲಿ ಪತ್ನಿಗೆ ಹೈ ಡೋಸ್ ಇಂಜೆಕ್ಷನ್ ಮಾಡಿದ್ದರಿಂದ ಸಾವನ್ನಪ್ಪಿರೋದು ದೃಢಪಟ್ಟಿದೆ. ಪತ್ನಿಯನ್ನು ಕೊಂದ ಬಳಿಕ ಸಹಜ ಸಾವು ಎಂಬಂತೆ ಬಿಂಬಿಸಲು ಪತಿ ಡಾಕ್ಟರ್ ಪ್ರಯತ್ನಿಸಿದ್ದನು.
ಅತ್ತೆ ದೂರು ನೀಡಿದ ಬಳಿಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಳಿಯನೇ ಮಗಳನ್ನು ಕೊಂದಿರುವ ಬಗ್ಗೆ ಮಹಿಳೆಯ ಪೋಷಕರು ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು.ಫೆ. 11, 2021ರಂದು ರಾಮಶ್ವೇರ ಗ್ರಾಮದ ಡಾ.ಚನ್ನೇಶಪ್ಪ (45) ಪತ್ನಿ ಶಿಲ್ಪಾ ಸಾವನ್ನಪ್ಪಿದ್ದರು. ಚನ್ನೇಶಪ್ಪ ಲೋ ಬಿಪಿಯಿಂದ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದನು.
ಡಾ.ಚನ್ನೇಶಪ್ಪ ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದನು. 18 ವರ್ಷಗಳ ಹಿಂದೆ ಹಿರೇಕೆರೂರಿನ ಶಿಲ್ಪಾ ಜೊತೆ ಚನ್ನೇಶಪ್ಪನ ಮದುವೆ ನಡೆದಿತ್ತು. ಮದುವೆ ವೇಳೆ ಶಿಲ್ಪಾ ಪೋಷಕರು ವರದಕ್ಷಿಣೆ ರೂಪದಲ್ಲಿ 700 ಗ್ರಾಂ ಬಂಗಾರ, ಒಂದು ಕೆಜಿ ಬೆಳ್ಳಿ ಮತ್ತು 7 ಲಕ್ಷ ರೂಪಾಯಿ ನೀಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು.
ವೈದ್ಯನಾಗಿದ್ದ ಚನ್ನೇಶಪ್ಪ ಸಹ ಸಿರಿವಂತ. ಮದುವೆ ಸಹ ಅದ್ಧೂರಿಯಾಗಿ ಮಾಡಕೊಡಲಾಗಿತ್ತು. 38 ಎಕರೆ ಜಮೀನು ಹೊಂದಿದ್ದ ಚನ್ನೇಶಪ್ಪ, ಡ್ರಿಂಕ್ ಮತ್ತು ಕ್ಯಾಸಿನೋ ದಾಸನಾಗಿದ್ದನು. ಪತ್ನಿಗೆ ತವರಿನಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದನು. ಜತೆಗೆ ನಿಧಿ ಆಸೆಗಾಗಿ ವಾಮಾಚಾರ ಮಾಡುತ್ತಿದ್ದನು ಎಂದು ಶಿಲ್ಪಾ ಪೋಷಕರು ಆರೋಪಿಸಿದ್ದಾರೆ.
ಫೆಬ್ರವರಿ 11ರಂದು ಶಿಲ್ಪಾ ಪೋಷಕರಿಗೆ ಫೋನ್ ಮಾಡಿದ್ದ ಚನ್ನೇಶಪ್ಪ, ನಿಮ್ಮ ಮಗಳಿಗೆ ಬಿಪಿ ಲೋ ಆಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ. ನೀವೂ ಆಸ್ಪತ್ರೆಗೆ ಬನ್ನಿ ಎಂದು ಹೇಳಿದ್ದನು. ಆದ್ರೆ ಶಿಲ್ಪಾ ದೇಹದ ಮೇಲೆ ಇಂಜೆಕ್ಷನ್ ಮಾಡಿರುವ ಗುರುತು ಕಂಡಿದ್ದ ತಾಯಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅನುಮಾನ ವ್ಯಕ್ತವಾದ ಹಿನ್ನೆಲೆ ಶಿಲ್ಪಾ ಪೋಷಕರು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮರಣೋತ್ತರ ಶವ ಪರೀಕ್ಷಗೆ ಆಗ್ರಹಿಸಿದ್ದರು.
ಪೋಷಕರ ಒತ್ತಾಯದ ಮೇರೆಗೆ ಮರಣೋತ್ತರ ಶವ ಪರೀಕ್ಷೆ ನಡೆಸಲಾಗಿತ್ತು. ಇದೀಗ ಎಫ್‌ಎಸ್ ವರದಿಯಲ್ಲಿ ಸಾವಿನ ರಹಸ್ಯ ವೈದ್ಯನನ್ನು ಕಂಬಿ ಎಣಿಸುವಂತೆ ಮಾಡಿದೆ.
ವೈದ್ಯ ಚನ್ನೇಶಪ್ಪ ನಿಧಿ ಪಡೆದುಕೊಳ್ಳಲು ವಾಮಾಚಾರ ಮಾಡಿಸುತ್ತಿದ್ದನು. ಮನೆಯಲ್ಲಿ ಹೋಮ-ಹವನ ನಡೆಸುತ್ತಿದ್ದನು. ವರದಕ್ಷಿಣೆ ನೀಡಿದ್ದರೂ ನಿಧಿ ಆಸೆಗಾಗಿಯೇ ಮಗಳನ್ನು ಅಳಿಯ ಕೊಲೆ ಮಾಡಿದ್ದಾನೆ ಎಂದು ಶಿಲ್ಪಾ ಪೋಷಕರು ಆರೋಪಿಸಿದ್ದಾರೆ.