ದಾವಣಗೆರೆ: ಕೊಟ್ಟ ಸಾಲ ಕೇಳಿದ್ದಕ್ಕೆ 79 ವರ್ಷದ ವೃದ್ಧನಿಗೆ ಹನಿಟ್ರ್ಯಾಪ್ ಗೆ ಮಾಡಿ 15 ಲಕ್ಷಕ್ಕೆ ಬೇಡಿಕೆ ಇಟ್ಟ ಮಹಿಳೆ, ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಕೈ ಸಾಲಾಗಿ ಕೊಟ್ಟಿದ್ದ ಹಣವನ್ನು ವಾಪಸ್ ಕೇಳಿದಕ್ಕೆ ಮಹಿಳೆ ಈ ರೀತಿ ಮಾಡಿದ್ದಾಳೆ. ಈ ಘಟನೆ ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
79 ವರ್ಷದ ವೃದ್ಧನಿಗೆ 32 ವರ್ಷದ ವಿವಾಹಿತೆಯ ಪರಿಚಯವಾಗಿತ್ತು. ಸಲುಗೆಯಿಂದ ಮನೆಗೆ ಬನ್ನಿ…, ಟೀ ಕುಡಿರೀ… ಎಂದು ಬಣ್ಣ ಬಣ್ಣದ ಮಾತನಾಡಿ ವೃದ್ಧನನ್ನು ಖೆಡ್ಡಕ್ಕೆ ಕೆಡವಿದ್ದಾಳೆ. ಸ್ನೇಹದ ನಂಬಿಕೆಯಿಂದ ವೃದ್ಧ, ಮಹಿಳೆ ಕೇಳಿದಷ್ಟು ಕೊಟ್ಟಿದ್ದಾರೆ. ಕೊಟ್ಟ ಹಣ ಕೇಳಲು ಹೋದಾಗ ಮಹಿಳೆ ವೃದ್ಧನಿಗೆ ಹನಿಟ್ರ್ಯಾಪ್ ಮಾಡಿ 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾಳೆ.
ನಗರದ ಶಿವಕುಮಾರ ಸ್ವಾಮಿ ಬಡಾವಣೆ ನಿವಾಸಿ ಚಿದಾನಂದಪ್ಪ ಹನಿಟ್ರ್ಯಾಪ್ ಗೆ ಒಳಗಾಗಿ 79ವರ್ಷದ ವೃದ್ಧ. ಈ ವೃದ್ಧನಿಗೆ ಸರಸ್ವತಿನಗರ ನಿವಾಸಿಯಾದ 32 ವರ್ಷದ ಯಶೋಧ ಪರಿಚಯವಾಗಿದೆ. ಹೀಗೆ ಪರಿಚಯವಾಗಿ ಇಬ್ಬರ ನಡುವೆ ಸ್ನೇಹ ಶುರುವಾಗಿದೆ. ಯಶೋಧಾ ಅವರು ಚಿದಾನಂದಪ್ಪನನ್ನ ಮನೆಗೆ ಆಹ್ವಾನಿಸುವುದು ಟೀ, ಕಾಫಿ ಜ್ಯೂಸ್ ಕುಡಿಸುವುದು ಸಾಮಾನ್ಯವಾಗಿದೆ. ಆಗ ಯಶೋಧಾ ಚಿದಾನಂದಪ್ಪನ ಬಳಿ ನೈಸ್ ಮಾಡಿ, ಬರೋಬರಿ 86 ಸಾವಿರ ರೂಪಾಯಿ ಸಾಲ ಪಡೆದಿದ್ದಾಳೆ. ಒಂದು ದಿನ ವಾಕಿಂಗ್ ಮುಗಿಸಿ ಯಶೋಧಾ ಮನೆಯ ಮುಂದೆ ಹಾಯ್ದು ಚಿದಾನಂದಪ್ಪ ಹೋಗುವಾಗ ಯಶೋಧಾ ಚಿದಾನಂದಪ್ಪನ್ನ ಕರೆದಿದ್ದಾಳೆ. ಜ್ಯೂಸ್ ಕೊಟ್ಟಿದ್ದಾಳೆ. ಆ ಜ್ಯೂಸ್ ಕುಡಿದ ಸ್ವಲ್ಪ ಸಮಯದಲ್ಲಿ ಚಿದಾನಂದಪ್ಪನ ಪ್ರಜ್ಞೆ ತಪ್ಪಿದೆ. ಎಚ್ಚರವಾದಾಗ ಮೇಲೆ ಬಟ್ಟೆ ಇರಲಿಲ್ಲ. ಭಯಗೊಂಡು ಬಟ್ಟೆ ಹಾಕಿಕೊಂಡು ಮನೆಗೆ ಬಂದಿದ್ದಾರೆ. ಬಳಿಕ ಎರಡು ದಿನ ನಂತರ ಮಹಿಳೆ ಹಣಕ್ಕಾಗಿ ಮತ್ತೆ ಚಿದಾನಂದಪ್ಪನವರಿಗೆ ಫೋನ್ ಮಾಡಿದ್ದಾಳೆ. ನಿನ್ನ ಅಶ್ಲೀಲ ವಿಡಿಯೋ ನನ್ನ ಬಳಿ ಇದೆ. 15 ಲಕ್ಷ ಕೊಡು ಇಲ್ಲವೆಂದರೆ ನಿನ್ನ ಫ್ಯಾಮಿಲಿಗೆ ತೊರಿಸುವೆ ಎಂದಿದ್ದಾಳೆ. ಹೆದರಿ ಈ ವಿಚಾರವನ್ನು ಚಿದಾನಂದಪ್ಪ ತಮ್ಮ ಪರಿಚಯದವರಿಗೆ ಹೇಳಿದ್ದಾರೆ. ಅವರು ಏಳರಿಂದ ಎಂಟು ಲಕ್ಷಕ್ಕೆ ಮಾತಾಡಿ ಮುಗಿಸಲು ಮುಂದಾಗಿದ್ದಾರೆ. ಆದ್ರೆ ಮಹಿಳೆ ಮಾತ್ರ 15 ಲಕ್ಷ ಕೊಡಬೇಕೆಂದು ಪಟ್ಟು ಹಿಡಿದಿದ್ದಾಳೆ.
ಈ ವೇಳೆ ಚಿದಾನಂದಪ್ಪನ ವಾಟ್ಸಪ್ ಗೆ ಒಂದು ನಗ್ನ ಫೋಟೋ ಕಳಿಸಿ ಬೆದರಿಸಿದ್ದಾಳೆ. ಇದಕ್ಕೆ ಹೆದರಿದ ವೃದ್ಧ ಈ ವಿಚಾರವನ್ನು ತನ್ನ ಪುತ್ರನಿಗೆ ಹೇಳಿದ್ದಾರೆ. ಆಗ ಕೆಟಿಜೆನಗರ ಠಾಣೆಯಲ್ಲಿ ದೂರು ದಾಖಲಿಸಿ ಯಶೋಧಾಳನ್ನ ವಶಕ್ಕೆ ಪಡೆದಿದ್ದಾರೆ. ವೃದ್ಧನಿಗೆ ಹನಿಟ್ರ್ಯಾಪ್ ಮಾಡಿದ್ದ ಯಶೋಧ ಇದೀಗ ಪೊಲೀಸರ ವಶದಲ್ಲಿದ್ದಾಳೆ.



