ದಾವಣಗೆರೆ: ಐದು ದಿನದಿಂದ ನಾಪತ್ತೆಯಾಗಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿಯ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರ ಪುತ್ರ ಚಂದ್ರಶೇಖರ್ ಕಾರು ತುಂಗಾ ಕಾಲುವೆಯಲ್ಲಿ ಪತ್ತೆಯಾಗಿದೆ. ಕಾರು ಬೃಹತ್ ಕಾಲುವೆಗೆ ಬಿದ್ದಿದ್ದು, ಕಾರಿನಲ್ಲಿದ್ದ ಚಂದ್ರಶೇಖರ್ (24) ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸೋದರ ಪುತ್ರ ಭಾನುವಾರ ನಾಪತ್ತೆ ಆಗಿದ್ದರು. ಕಳೆದ ನಾಲ್ಕೈದು ದಿನದಿಂದ ಎಲ್ಲ ಕಡೆ ಹುಡುಕಾಟ ನಡೆಸಲಾಗಿತ್ತು. ಪೊಲೀಸರು ಕಾರಿನ ಕುರುಹು ಆಧಾರದ ಮೇಲೆ ಭದ್ರಾ ಕಾಲುವೆಯಲ್ಲಿ ಕಾರು ಬಿದ್ದಿರುವುದನ್ನು ಪತ್ತೆ ಮಾಡಿದ್ದಾರೆ. ಈ ಕಾರನ್ನು ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಮೂಲಕ ಮೇಲೆ ಎತ್ತಿದ್ದಾರೆ. ಕಾರಿನಲ್ಲಿ ಹಿಂಬದಿ ಸೀಟ್ ನಲ್ಲಿ ಚಂದ್ರಶೇಖರ್ ಮೃತದೇಹ ಪತ್ತೆಯಾಗಿದೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ತುಂಗಾ ಕಾಲುವೆಗೆ ಚಂದ್ರಶೇಖರ್ ಕಾರು ಬಿದ್ದಿದೆ. ಕ್ರೇನ್ ಮೂಲಕ ಕಾರನ್ನು ಮೇಲಕ್ಕೆ ಎತ್ತಲಾಗಿದೆ. ಐದು ದಿನಗಳಿಂದ ನಾಪತ್ತೆಯಾಗಿರುವ ಚಂದ್ರಶೇಖತ್ ಪತ್ತೆಗೆ ಪೊಲಿಸರು ತೀವ್ರ ಹುಡುಕಾಟ ನಡೆಸಿದರು. ಚಂದ್ರಶೇಖರ್ ನಾಪತ್ತೆಯಿಂದ ಕುಟುಂಬಸ್ಥರು ಕಂಗಾಲಾಗಿದ್ದರು. ಅಣ್ಣನ ಮಗ ಕಾರು ಬಿದ್ದ ಸ್ಥಳಕ್ಕೆ ಆಗಮಿಸಿದ ಶಾಸಕ ರೇಣುಕಾಚಾರ್ಯ, ನಿನ್ನ ಸಾವಿಗೆ ನಾನೇ ಕಾರಣ ಆಗಿ ಬಿಟ್ನಲ್ಲೋ…, ಚಂದ್ರು ನನ್ನನ್ನು ಕರೆದುಕೊಳ್ಳೋ… ಚಂದ್ರು, ನನಗೆ ಬೆಂಕಿ ಹಚ್ಚಪ್ಪ….. ಎಂದು ಬಿಕ್ಕಿ ಬಿಕ್ಕಿ ಅತ್ತರು.
ಚಂದ್ರಶೇಖರ್ ಭಾನುವಾರ (ಅಕ್ಟೋಬರ್ 30) ರಾತ್ರಿ 11.30 ರಿಂದ ನಾಪತ್ತೆಯಾಗಿದ್ದರು. ಭಾನುವಾರ ಸಂಜೆ ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರು ರಾತ್ರಿ ಊರಿಗೆ ವಾಪಸ್ ಆಗಿದ್ದ. ರಾತ್ರಿ 11 ಗಂಟೆ ಸುಮಾರಿಗೆ ದೆಹಲಿಯ ಸ್ನೇಹಿತರ ಜೊತೆ ಕೊನೆಯದಾಗಿ ಮಾತಾಡಿದ್ದಾನೆ. 11.30 ಕ್ಕೆ ಹೊನ್ನಾಳಿ ಪಟ್ಟಣದಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅಲ್ಲಿಂದ ಇಲ್ಲಿಯವರೆಗೆ ಸಿಗ್ನಲ್ ಟ್ರೇಸ್ ಆಗಿಲ್ಲ. ಅಲ್ಲದೆ ಶಿವಮೊಗ್ಗ ದಿಂದ ನ್ಯಾಮತಿ ತಾಲ್ಲೂಕಿನ ಸುರಹೊನ್ನೆಗೆ ಬಂದ ಸಿಸಿ ಕ್ಯಾಮರಾ ಪುಟೇಜ್ ಮಾತ್ರ ಸಿಕ್ಕಿತ್ತು.. ಆದರೆ ಸುರಹೊನ್ನೆಯಿಂದ ಹೊನ್ನಾಳಿ ಗೆ ಬಂದ ಮಾಹಿತಿ ಸಿಕ್ಕಿರಲಿಲ್ಲ.. ಆದರೆ ಚಂದ್ರಶೇಖರ್ ಮೊಬೈಲ್ ಮಾತ್ರ ಹೊನ್ನಾಳಿ ಪಟ್ಟಣದ ಸರ್ಕಲ್ ನಲ್ಲಿ ಸ್ವಿಚ್ ಆಫ್ ಆಗಿತ್ತು.



