ದಾವಣಗೆರೆ: ಮಹಿಳೆ ಬಲಿ ಪಡೆದ ಚಿರತೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಯ ಒಂದು ವಾರದ ಕಾರ್ಯಾಚರಣೆಗೆ ಫಲ ಸಿಕ್ಕಿದೆ. ಕೊನೆಗೂ ಚಿರತೆ ಬೋನಿಗೆ ಬಿದ್ದಿದೆ.
ನ್ಯಾಮತಿ ತಾಲ್ಲೂಕಿನ ಫಲವನಹಳ್ಳಿ ಗ್ರಾಮದಲ್ಲಿ ಮಹಿಳೆಯನ್ನು ಕೊಂದ ಚಿರತೆ ಒಂದು ವಾರದ ನಂತರ ಬೋನಿನಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಮಹಿಳೆಯನ್ನು ಕೊಂದ ಸ್ಥಳದಲ್ಲಿ ಮೊದಲಿಗೆ 7 ಬೋನುಗಳು, 7 ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು. ಚಿರರೆ ಹೆಜ್ಜೆಗುರುತು ಕಂಡಬಂದ ಕಡೆ ಬೋನು ಸ್ಥಳಾಂತರಿಸಲಾಗಿತ್ತು. ಶಿವಮೊಗ್ಗ ಮೀಸಲು ಅರಣ್ಯ ಆಲದಹಳ್ಳಿ ವಲಯದ ಬೋನಿಗೆ ಚಿರತೆ ಬಿದ್ದಿದೆ.
ಈ ವೇಳೆ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನಕುಮಾರ, ಹೊನ್ನಾಳಿ ವಲಯ ಅರಣ್ಯಾಧಿಕಾರಿ ಕೆ.ಆರ್. ಚೇತನ್, ಉಪ ವಲಯ ಅರಣ್ಯಾಧಿಕಾರಿಗಳಾದ ಬರ್ಕತ್ ಅಲಿ ಮತ್ತು ಶಿವಯೋಗಿ, ಅರಣ್ಯ ರಕ್ಷಕರಾದ ಕೃಷ್ಣಮೂರ್ತಿ, ಲಿಂಗರಾಜ ಮತ್ತು ಅರಣ್ಯ ನಿರೀಕ್ಷ ಚಂದ್ರಪ್ಪ, ಶಿವಮೊಗ್ಗ ಅರಣ್ಯ ಮತ್ತು ಶಂಕರ ವಲಯ ಅರಣ್ಯಾಧಿಕಾರಿ, ಸಿಬ್ಬಂದಿ ಇದ್ದರು.



