ದಾವಣಗೆರೆ: ಜಿಲ್ಲೆಯ ಜಗಳೂರು ತಾಲ್ಲೂಕಿನ ಕಾನನಕಟ್ಟೆ ಹೊಸೂರು ಗ್ರಾಮದಲ್ಲಿ ಫಲಕ್ಕೆ ಬಂದಿದ್ದ ಸೇವಂತಿ ಹೂವಿನಗಿಡಗಳನ್ನು ಕಿಡಿಗೇಡಿಗಳು ಕಿತ್ತು ಹಾಕಿ ಲಕ್ಷಾಂತರ ರೂಪಾಯಿ ಬೆಲೆಯ ನಷ್ಟ ಉಂಟುಮಾಡಿರುವ ಘಟನೆ ನಡೆದಿದೆ.
ಗ್ರಾಮದ ರೈತ ಚಿತ್ತಪ್ಪ ತನ್ನ ಒಂದು ಎಕರೆ ಜಮೀನಿನಲ್ಲಿ ಸೇವಂತಿ ಹೂವಿನ ಗಿಡಗಳನ್ನು ಬೆಳೆದಿದ್ದ. ಶ್ರಾವಣ ಹಬ್ಬದಲ್ಲಿ ಮಾರುಕಟ್ಟೆಗೆ ಕಳಿಸಬೇಕು ಎಂದು ಯೋಜನೆ ಹಾಕಿಕೊಂಡಿದ್ದ. ಆದರೆ ಬೆಳಗಾಗುವುದರೊಳಗೆ ಹೂವಿನ ಗಿಡಗಳನ್ನು ಕಿಡಿಗೇಡಿಗಳು ಕಿತ್ತು ಹಾಕಿದ್ದಾರೆ.
ಶ್ರಾವಣ ಮಾಸದಿಂದ ನಿರಂತರವಾಗಿ ಹಬ್ಬಗಳು ನಡೆಯುವುದರಿಂದ ಸೇವಂತಿ ಹೂ ಕೈ ಆರ್ಥಿಕ ಲಾಭ ತಂದುಕೊಡುತ್ತದೆ ಎಂಬ ಭರವಸೆಯಿಟ್ಟಿದ್ದ ರೈತನಿಗೆ ಕಿಡಿಗೇಡಿಗಳ ಕೃತ್ಯದಿಂದ ಲಕ್ಷಾಂತರ ರೂ ನಷ್ಟ ಉಂಟುಮಾಡಿದ್ದಾರೆ. ಮೂವತ್ತು ಸಾವಿರ ರೂಗಳನ್ನು ಸಾಲ ಮಾಡಿ ಬಿತ್ತನೆ ಮಾಡಲಾಗಿತ್ತು. ಉತ್ತಮ ಮಳೆಯಾಗುತ್ತಿದ್ದು, ಫಸಲು ಉತ್ತಮವಾಗಿತ್ತು. ಆದರೆ, ಅಸೂಹೆಗೆ ಕಿರಾತರು ಲಕ್ಷಾಂತರ ರೂಪಾಯಿ ಆದಾಯ ಬರುವ ನಿರೀಕ್ಷೆಯಿದ್ದ ಗಿಡಗಳನ್ನು ರಾತ್ರೋರಾತ್ರಿ ನೆಲಸಮ ಮಾಡಿದ್ದಾರೆ.
ಸ್ಥಳಕ್ಕೆ ಜಗಳೂರು ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ



