ದಾವಣಗೆರೆ: ಪ್ಲೀಫ್ ಕಾರ್ಟ್ ಪೇ ಲೆಟರ್ ಅಕೌಂಟ್ ಹ್ಯಾಕ್ ಮಾಡಿ ಪಾಸ್ ವರ್ಡ್ ಬದಲಿಸಿ ಸೈಬರ್ ವಂಚನೆ ಮಾಡುತ್ತಿದ್ದ ರಾಜಸ್ಥಾನ ಮೂಲದ ಆರೋಪಿಯೊಬ್ಬನನ್ನು ಜಿಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಕ್ಷಿತ ಬಿ. ಎಂಬುವರು ಪ್ಲೀಫ್ ಕಾರ್ಟ್ ಡಿಜಿಟಲ್ ವೋಚರ್ ಪಡೆದ ಅಪರಚಿತ ವ್ಯಕ್ತಿ 45 ಸಾವಿರ ವಂಚನೆ ಮಾಡಿದ್ದಾರೆ ಎಂದು ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರ ಆಧಾರಿಸಿ ಡಿಸಿಆರ್ ಬಿ ಘಟಕದ ಡಿವೈಎಸ್ ಪಿ ಬಸವರಾಜ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಪಿಎಸ್ ಐ ಪರಮೇಶ್ ಡಿ.ಜಿ. ಅವರನ್ನೊಳಗೊಂಡ ತಂಡ ರಾಜಸ್ಥಾನದ ಅಲ್ವಾರ ನಗರದ ಆರೋಪಿ ಅಮನ್ ತಿವಾರಿ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ ನಾಲ್ಕು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನಂತರ ದಾವಣಗೆರೆಗೆ ಕರೆದುಕೊಂಡು ಬಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ಬಂಧಿಸುವಲ್ಲಿ ಯಶಸ್ವಿಯಾದ ಸಿಇಎನ್ ಅಪರಾಧ ಪೊಲೀಸರಿಗೆ ಎಸ್.ಪಿ ರಿಷ್ಯಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲ ತಾಣದಲ್ಲಿ ಇಮೇಲ್ , ಯುಪಿಐ ಮೂಲಕ ಖಾತೆ ಹ್ಯಾಕ್ ಮಾಡಿ ವಂಚನೆ ಮಾಡುವ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಆನ್ ಲೈನ್ ವ್ಯವಹಾರ ಮಾಡಬೇಕು ಜತೆಗೆ ಸ್ಟ್ರಾಂಗ್ ಪಾಸ್ ವರ್ಡ್ ನೀಡಬೇಕು ಎಂದು ಸಾರ್ವಜನಿಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.



