ದಾವಣಗೆರೆ: ಗ್ರಾಮ ದೇವತೆ ಜಾತ್ರೆ ದಿನವೇ ಪತ್ನಿಯನ್ನು ಪತಿಯೇ ಕೊಲೆ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಕಂಠಪೂರ್ತಿ ಕುಡಿದ ಮತ್ತಿನಲ್ಲಿ ಹಲ್ಲೆ ನಡೆಸಿ, ಪತ್ನಿಯನ್ನು ಕೊಲೆ ಮಾಡಿದ್ದಾನೆ.
ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಮೂರು ದಿನ ಗ್ರಾಮ ದೇವತೆ ಜಾತ್ರೆ ಇತ್ತು. ನಿನ್ನೆ (ಜ.31) ರಾತ್ರಿ ಕಂಠಪೂರ್ತಿ ಕುಡಿದು ಮನೆಗೆ ಬಂದ ಪತಿ ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಅರ್ಪಿತಾ (24) ಕೊಲೆಯಾದ ಪತ್ನಿ. ಹನುಮಂತ (28) ಕೊಲೆ ಮಾಡಿದ ಆರೋಪಿ ಪತಿ ಆಗಿದ್ದಾನೆ.
ಕುಡಿದ ಅಮಲಿನಲ್ಲಿ ಪತ್ನಿಯ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದು, ಕಿವಿಯಲ್ಲಿ ರಕ್ತ ಬಂದು ಅರ್ಪಿತಾ ಸಾವನ್ನಪ್ಪಿದ್ದಾರೆ. ಐದು ವರ್ಷಗಳ ಬಳಿಕ ಬಂದ ಗ್ರಾಮದೇವತೆ ಹಬ್ಬಕ್ಕೆ ಮಾಂಸಾಹಾರದ ಊಟವನ್ನೂ ಮಾಡಲಾಗಿತ್ತು. ಜಾತ್ರೆ ಹಿನ್ನೆಲೆ ಕಂಠಪೂರ್ತಿ ಮದ್ಯಪಾನ ಮಾಡಿದ್ದ ಹನುಮಂತ, ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಜಗಳ ಆರಂಭಿಸಿದ್ದಾನೆ. ಆದರೆ, ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಹಲ್ಲೆ ಮಾಡಿದ್ದು, ಈಗ ಪತ್ನಿ ಸಾವನ್ನಪ್ಪಿದ್ದಾಳೆ.
ಕಳೆದೆರಡು ವರ್ಷದ ಹಿಂದೆ ಹನುಮಂತ ಮತ್ತು ಅರ್ಪಿತಾ ಮದುವೆಯಾಗಿತ್ತು. ಆರೋಪಿ ಹನುಮಂತನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸ್ದಳಕ್ಕೆ ದಾವಣಗೆರೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



