ದಾವಣಗೆರೆ: ಕೋವಿಡ್-19 ಸೋಂಕು ನಿಯಂತ್ರಣ ಸಂಬಂಧ ಸರ್ಕಾರದ ಆದೇಶದಂತೆ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ವಸತಿ ಶಾಲೆ ಜತೆ ಇತರೆ ಸಾರ್ವಜನಿಕರಿಗೆ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಿಕೆ ಕಾರ್ಯಕ್ರಮ ಶನಿವಾರವೂ ಮುಂದುವರೆಯಲಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.
ಶನಿವಾರದಂದು ನಗರದ ವಿರಕ್ತ ಮಠ ಪ್ರೌಢಶಾಲೆ, ಸರ್ ಎಂ.ವಿ. ಕಾಲೇಜು ಹಾಗೂ ಲಲಿತಾ ಇಂಟರ್‍ನ್ಯಾಷನಲ್ ಶಾಲೆಯಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುವುದು. ಇತರೆ ಸಾರ್ವಜನಿಕರಿಗೆ ಆಯಾ ಪ್ರಾಥಮಿಕ ಕೇಂದ್ರಗಳ ವ್ಯಾಪ್ತಿಯಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಇದುವರೆಗೂ ಮೊದಲ ಡೋಸ್ ಪಡೆಯದವರಿಗೆ ಹಾಗೂ ನಿಗದಿತ ಅವಧಿ ಪೂರ್ಣಗೊಂಡವರಿಗೆ ಎರಡನೆ ಡೋಸ್ ಲಸಿಕೆ ನೀಡಲಾಗುವುದು.
15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ಲಸಿಕೆಗೆ ಸಂಬಂಧಿಸಿದಂತೆ ತಾಲ್ಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಒಟ್ಟು 37130 ಮಕ್ಕಳ ಗುರಿಯ ಬದಲಿಗೆ ಈವರೆಗೆ 31600 ಮಕ್ಕಳಿಗೆ ಲಸಿಕೆ ನೀಡಿ, ಶೇ. 85 ರಷ್ಟು ಸಾಧನೆಯಾಗಿದೆ, ಬಾಕಿ 5530 ಮಕ್ಕಳಿಗೆ ಎರಡ್ಮೂರು ದಿನಗಳಲ್ಲಿ ಲಸಿಕೆ ನೀಡಲಾಗುವುದು.
ಕೋವಿಡ್ ಪರೀಕ್ಷೆ : ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ಪರೀಕ್ಷೆ ಮಾಡಿಸಿಕೊಳ್ಳ ಬಯಸುವವರಿಗೆ ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿದಿನ ಬೆಳಿಗ್ಗೆ 09 ರಿಂದ ಸಂಜೆ 07 ಗಂಟೆಯವರೆಗೆ ಫ್ಲೂ ಕಾರ್ನರ್, ರೂಂ. ನಂ. 02 (ಸುಟ್ಟ ಗಾಯಗಳ ವಿಭಾಗದ ಪಕ್ಕ), ಅಲ್ಲದೆ ನಗರದ ಎಲ್ಲಾ ನಗರ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಕೋವಿಡ್-19 ಆರ್‍ಟಿಪಿಸಿಆರ್ ಮತ್ತು ರ್ಯಾಪಿಡ್ ಟೆಸ್ಟ್ ಮಾಡಲಾಗುವುದು. ರಾತ್ರಿ ಸಮಯದಲ್ಲಿ ಅಂದರೆ ರಾತ್ರಿ 07 ಗಂಟೆಯಿಂದ ಬೆಳಗಿನ 06 ಗಂಟೆಯವರೆಗೆ ತುರ್ತು ರೋಗಿಗಳಿಗೆ ಮಾತ್ರ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ರೂ. ನಂ. 13 ರಲ್ಲಿ ಕೋವಿಡ್ ಟೆಸ್ಟ್ ಮಾಡಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ