ದಾವಣಗೆರೆ: ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದಾವಣಗೆರೆ ತಾಲ್ಲೂಕಿನಲ್ಲಿ ನ. 24 ರಂದು ಬೃಹತ್ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿದ್ದು, ಒಟ್ಟು 16, 500 ಕೋವಿಶೀಲ್ಡ್ ಲಸಿಕೆಯನ್ನು ಹಂಚಿಕೆ ಮಾಡಲಾಗಿದೆ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲೂ ಲಸಿಕೆ ನೀಡಿಕೆಗೆ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.
ನ.24 ರಂದು ದಾವಣಗೆರೆ ನಗರ ವ್ಯಾಪ್ತಿಯಲ್ಲಿರುವ ಎಲ್ಲ 09 ನಗರ ಆರೋಗ್ಯ ಉಪಕೇಂದ್ರಗಳ ವ್ಯಾಪ್ತಿಯಲ್ಲಿ 9000 ಡೋಸ್ ಕೋವಿಶೀಲ್ಡ್ ಲಸಿಕೆ ನೀಡಲಾಗುವುದು. ತಾಲ್ಲೂಕು ವ್ಯಾಪ್ತಿಯ ಎಲ್ಲ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 7000 ಡೋಸ್ ಕೋವಿಶೀಲ್ಡ್, ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ 500 ಡೋಸ್ ಕೋವಿಶೀಲ್ಡ್ ಸೇರಿದಂತೆ ಒಟ್ಟು 16500 ಸಾವಿರ ಡೋಸ್ ಕೋವಿಶೀಲ್ಡ್ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ನಿರೋಧಕ ಲಸಿಕೆ ನೀಡಿಕೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆಯಾಗದಿರುವುದರಿಂದ, ಜಿಲ್ಲಾಧಿಕಾರಿಗಳ ಸೂಚನೆಯಂತೆ ಈ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಪಡೆಯಲು ಬರುವವರ ಆಧಾರ್ ಕಾರ್ಡ್ ಪರಿಶೀಲಿಸಿ, ಒಂದು ವೇಳೆ ಮೊದಲನೆ ಡೋಸ್ ಪಡೆದು, ಎರಡನೆ ಡೋಸ್ ಪಡೆಯದಿರುವವರು ಕಂಡುಬಂದಲ್ಲಿ ಹಾಗೂ ಒಂದೂ ಡೋಸ್ ಪಡೆಯದೇ ಇರುವುದು ಕಂಡುಬಂದಲ್ಲಿ, ಸ್ಥಳದಲ್ಲಿಯೇ ಅವರ ಮನವೊಲಿಸಿ, ಆರೋಗ್ಯ ಶಿಕ್ಷಣ ನೀಡುವ ಮೂಲಕ ಅಂತಹವರಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೆ ಇಂತಹ ಕ್ರಮ ಕಳೆದ ನ. 17 ರಿಂದಲೇ ಪ್ರಾರಂಭವಾಗಿದ್ದು, ನ. 30 ರವರೆಗೂ ಇದನ್ನು ಮುಂದುವರೆಸಲಾಗುವುದು.
18 ವರ್ಷ ಮೇಲ್ಪಟ್ಟ ಎಲ್ಲರೂ ಕೂಡ ಕೋವಿಡ್ ನಿರೋಧಕ ಲಸಿಕೆಯನ್ನು ತಪ್ಪದೆ ಪಡೆದುಕೊಳ್ಳಬೇಕು. ಇದುವರೆಗೂ ಮೊದಲನೆ ಡೋಸ್ ಪಡೆಯದವರು ಹಾಗೂ ಈಗಾಗಲೆ ಮೊದಲನೆ ಡೋಸ್ ಪಡೆದು, ನಿಗದಿತ ಅವಧಿ ಪೂರ್ಣಗೊಂಡವರು ಎರಡನೆ ಡೋಸ್ ಲಸಿಕೆ ಪಡೆಯಬೇಕು. ಪ್ರಸ್ತುತ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ನಿರ್ಲಕ್ಷಿಸಿ, ಲಸಿಕೆ ಹಾಕಿಸಿಕೊಳ್ಳದಿದ್ದಲ್ಲಿ ಅಂತಹವರು ಸೋಂಕಿಗೆ ಒಳಗಾಗಿ ತೀವ್ರ ಆರೋಗ್ಯ ತೊಂದರೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಹಾಗೂ ತಪ್ಪು ಕಲ್ಪನೆಗಳಿಗೆ ಒಳಗಾಗದೆ, ಕೋವಿಡ್ ನಿರೋಧಕ ಲಸಿಕೆ ಪಡೆಯಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.



