Connect with us

Dvgsuddi Kannada | online news portal | Kannada news online

ದಾವಣಗೆರೆ: ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ; ನುಡಿದಂತೆ ನಡೆದಿದ್ದೇವೆ; ಶಾಮನೂರು ಶಿವಶಂಕರಪ್ಪ

ದಾವಣಗೆರೆ

ದಾವಣಗೆರೆ: ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ; ನುಡಿದಂತೆ ನಡೆದಿದ್ದೇವೆ; ಶಾಮನೂರು ಶಿವಶಂಕರಪ್ಪ

ದಾವಣಗೆರೆ: ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಲಾಗಿದ್ದ ಉಚಿತ ಪ್ರಯಾಣದ ಶಕ್ತಿ, 200 ಯುನಿಟ್‍ವರೆಗೆ ಉಚಿತ ಕರೆಂಟ್ ಗೃಹಜ್ಯೋತಿ, ಮನೆ ಯಜಮಾನಿಗೆ ತಿಂಗಳಿಗೆ ಎರಡು ಸಾವಿರ ನೀಡುವ ಗೃಹಲಕ್ಷ್ಮಿ, 10 ಕೆ.ಜಿ.ಅಕ್ಕಿ ನೀಡುವ ಅನ್ನಭಾಗ್ಯ, ಪದವೀಧರ, ಡಿಪ್ಲೊಮಾ ಉತ್ತೀರ್ಣರಾದವರಿಗೆ ಎರಡು ವರ್ಷಗಳ ವರೆಗೆ ನಿರುದ್ಯೋಗ ಭತ್ಯೆ ನೀಡುವ ಗ್ಯಾರಂಟಿ ಯೋಜನೆಗಳನ್ನು ಚಾಚು ತಪ್ಪದೇ ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದೆ. ಇದು ಜನಪರ ಸರ್ಕಾರವಾಗಿದ್ದು ಜನರು ಸಹ ಸರ್ಕಾರದ ಪರವಾಗಿರಬೇಕೆಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಡಾ; ಶಾಮನೂರು ಶಿವಶಂಕರಪ್ಪನವರು ತಿಳಿಸಿದರು.

ಕುಕ್ಕುವಾಡ ಗ್ರಾಮದಲ್ಲಿ ಏರ್ಪಡಿಸಲಾದ ಗ್ಯಾರಂಟಿ ಯೋಜನೆಗಳ ಗ್ರಾಮ ಮಟ್ಟದ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರ ಜನರಿಗೆ ನೀಡಿದ ಆಶ್ವಾಸನೆಯಂತೆ ನಿಗದಿತ ಸಮಯದಲ್ಲಿಯೇ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಅನುಕೂಲ ಕಲ್ಪಿಸಿದೆ. ಗ್ಯಾರಂಟಿ ಯೋಜನೆಗಳಿಂದ ಕುಟುಂಬದಲ್ಲಿ ಆರ್ಥಿಕ ಬಲ ಬಂದಿದ್ದು ಜೀವನ ಮಟ್ಟ ಸುಧಾರಣೆ ಹಾಗೂ ನಿರ್ವಹಣೆಯು ಸುಲಭವಾಗಿದೆ. ಬಡವರು, ಮಧ್ಯಮ ವರ್ಗದವರಿಗೆ ಗ್ಯಾರಂಟಿ ಯೋಜನೆಗಳಿಂದ ಬಹಳ ಅನುಕೂಲವಾಗಿದೆ ಎಂದರು.

ಕೆಲವೊಂದು ತಾಂತ್ರಿಕ ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯ ರೂ.2000 ಮತ್ತು ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ.ಅಕ್ಕಿ ಬದಲಿಗೆ ನೀಡಲಾಗುವ ಹಣವು ಆಧಾರ್ ಜೋಡಣೆ, ಪಡಿತರ ಚೀಟಿಯ ತಿದ್ದುಪಡಿ, ಆಧಾರ್ ತಿದ್ದುಪಡಿಯ ಕಾರಣದಿಂದ ಬಾರದೆ ಇರಬಹುದು. ಅಧಿಕಾರಿಗಳು ಇರುವ ಎಲ್ಲಾ ಅಡೆತಡೆಗಳನ್ನು ನಿವಾರಣೆ ಮಾಡಿ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುವರು, ಯಾವುದೇ ಆತಂಕ ಬೇಡ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ ಮಾತನಾಡಿ ಸರ್ಕಾರ ಜನರ ಕಲ್ಯಾಣಕ್ಕಾಗಿ ಅದರಲ್ಲಿಯೂ ಮಹಿಳೆಯರ ಕಲ್ಯಾಣಕ್ಕಾಗಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಯಶಸ್ವಿಯಾಗಿ ಅನುಷ್ಟಾನ ಮಾಡಲಾಗಿದೆ. ಈ ಐದು ಗ್ಯಾರಂಟಿ ಯೋಜನೆಗಳ ಉಪಯೋಗ ಪಡೆಯದೇ ಇರುವವರ ಸಂಖ್ಯೆ ತೀರಾ ವಿರಳವಾಗಿದೆ. ಪ್ರತಿ ಕುಟುಂಬವು ಇದರ ಫಲಾನುಭವಿಗಳಾಗಿದ್ದು ಕೆಲವರು ಎಲ್ಲಾ ಯೋಜನೆಗಳ ಲಾಭ ಪಡೆದಿದ್ದರೆ, ಇನ್ನುಳಿದವರು ಒಂದೆರಡು ಯೋಜನೆಗಳ ಉಪಯೋವನ್ನು ಪಡೆದೇ ಇರುತ್ತಾರೆ.

ಈ ಯೋಜನೆಗಳಿಂದ ಕುಟುಂಬದ ಬಡತನ ನಿರ್ಮೂಲನೆ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮೇಲೆತ್ತುವ ಮೂಲಕ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿದೆ. ಈಗ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಕೈಗೊಳ್ಳುವ ಮೂಲಕ ಜನರಿಗೆ ಮತ್ತಷ್ಟು ಜಾಗೃತಿ ಮೂಡಿಸುವ ಮೂಲಕ ತಾಂತ್ರಿಕ ಕಾರಣದಿಂದ ಯೋಜನೆ ಪಡೆಯಲು ಸಾಧ್ಯವಾಗದ ಫಲಾನುಭವಿಗಳಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯಡಿ ಕೆಲವರಿಗೆ ಹಣ ಬಂದಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ಅವರ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯಲ್ಲಿನ ಹೆಸರು ವ್ಯತ್ಯಾಸ ಮತ್ತು ಇನ್ನಿತರೆ ಕಾರಣಗಳಿಂದ ಬಾರದೇ ಇರಬಹುದು. ಈ ತೊಂದರೆಗಳನ್ನು ನಿವಾರಿಸುವ ಕೆಲಸ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಿಂದ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ನೊಂದಣಿಯಾದ ಮಹಿಳೆಯರಿಗೆ ಹಣ ಬಾರದ ತಾಂತ್ರಿಕ ಸಮಸ್ಯೆ ನಿವಾರಣೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಫಲಾನುಭವಿ ಪುಷ್ಪ ಮಾತನಾಡಿ ಶಕ್ತಿ ಯೋಜನೆಯಿಂದ ನನಗೆ ಬಹಳ ಅನುಕೂಲವಾಗಿದೆ. ಉಚಿತ ಪ್ರಯಾಣದಿಂದ ಮನೆಯಲ್ಲಿ ಪತಿ, ಮಾವ, ಅತ್ತೆಗೆ ಬಸ್ ಚಾರ್ಜ್‍ಗೆ ಹಣ ಕೊಡು ಎಂದು ಕೇಳುವಂತಿಲ್ಲ, ನಮಗೆ ಬೇಕಾದ ಪ್ರೇಕ್ಷಣೀಯ ಸ್ಥಳವನ್ನು ನೋಡಿಕೊಂಡು ಬರಲು ಮಹಿಳೆಯರಿಗಂತೂ ತುಂಬಾ ಅನುಕೂಲವಾಗಿದೆ ಎಂದು ತಮ್ಮ ಸಂತಸ ಹಂಚಿಕೊಂಡರು.

ರೇಖಾ ಎಂಬ ಗೃಹಲಕ್ಷ್ಮಿ ಫಲಾನುಭವಿ ಮಾತನಾಡಿ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ಬರುವುದರಿಂದ ಖರ್ಚುವೆಚ್ಚಕ್ಕೆ ಬಡ ಹೆಣ್ಣು ಮಕ್ಕಳಿಗೆ ಬಹಳ ಅನುಕೂಲ, ನನ್ನಂತೆ ಟೈಲರಿಂಗ್ ಮಾಡುವವರು ಟೈಲರಿಂಗ್‍ಗೆ ಬೇಕಾದ ವಸ್ತುಗಳ ಖರೀದಿಗೆ ಬೇರೆಯವರನ್ನು ಹಣ ಕೇಳದೆ ಈ ಹಣವನ್ನು ಸ್ವಂತ ಬಂಡವಾಳವಾಗಿ ಉಪಯೋಗಿಸಬಹುದು. ಇದಲ್ಲದೇ ಮಕ್ಕಳ ವಿದ್ಯಾಬ್ಯಾಸಕ್ಕೆ, ಅವರಿಗೆ ಬೇಕಾದ ವಸ್ತು ಕೊಡಿಸಲು ಸಹಕಾರಿಯಾಗಿದೆ. ಅನ್ನಭಾಗ್ಯದಡಿ ಐದು ಕೆ.ಜಿ.ಅಕ್ಕಿ ಬದಲಾಗಿ ಹಣ ನೀಡುತ್ತಿದ್ದು ಇದನ್ನು ಮನೆಯ ಇತರೆ ಖರ್ಚಿಗೆ ಬಳಸಬಹುದಾಗಿದೆ. ಸರ್ಕಾರ ಬಂದಾಗಿನಿಂದ ಮಹಿಳೆಯರ ಖರ್ಚು ಬಹಳ ಕಡಿಮೆಯಾಗಿದ್ದು ಖರ್ಚಿಗೆ ಮನೆಯ ಇತರೆಯವರ ಮೇಲೆ ಅವಲಂಬಿತವಾಗದೆ, ಸ್ವಾವಲಂಭಿ ಬದುಕು ಕಟ್ಟಿಕೊಂಡಿದ್ದೇವೆ ಎಂದರು.

ಮತ್ತೋರ್ವ ಮಹಿಳೆ ಸುನಂದ ಮಾತನಾಡಿ ಗೃಹಜ್ಯೋತಿ ಯೋಜನೆ ಬಗ್ಗೆ ಮಾತನಾಡಿ ಉಚಿತವಾಗಿ ವಿದ್ಯುತ್ ನೀಡಿದರೂ ನಿರಂತರವಾಗಿ ಕರೆಂಟ್ ಇರುತ್ತದೆ. ಇದರಿಂದ ಗ್ರಾಮೀಣ ಭಾಗದ ಓದುವ ಮಕ್ಕಳಿಗೆ ಅನುಕೂಲವಾಗಿದೆ. ಶೂನ್ಯ ಬಿಲ್ ಬರುವುದರಿಂದ ಬಡವರು ಸಹ ನಿರಾತಂಕವಾಗಿ ಬೇಸಿಗೆಯಲ್ಲಿ ಪ್ಯಾನ್ ಉಪಯೋಗಿಸಬಹುದಾಗಿದೆ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಿಗೆ ಒಳ್ಳೆಯದಾಗಿದ್ದು ಸರ್ಕಾರ ಉತ್ತಮ ಕೆಲಸ ಮಾಡಿದೆ ಎಂದರು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ದುರ್ಗಶ್ರೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ತಹಶೀಲ್ದಾರ್ ಅಶ್ವಥ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀನಿವಾಸ್, ತಾ.ಪಂ.ಸಹಾಯಕ ನಿರ್ದೇಶಕ ಅಭಿಜೀತ್, ಸಿಡಿಪಿಓ ಅಭಿಕುಮಾರ್, ಪಿಡಿಓ ಲಕ್ಷ್ಮಿದೇವಿ ಹಾಗೂ ಕೆಎಸ್‍ಆರ್‍ಟಿಸಿ ಡಿಪೋ ಮ್ಯಾನೇಜರ್ ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top