ದಾವಣಗೆರೆ: ಕಾಂಗ್ರೆಸ್ ಪಕ್ಷ ಇಂದು 43 ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ನಿನ್ನೆಯಷ್ಟೇ ಕಾಂಗ್ರೆಸ್ ಸೇರ್ಪಡೆಗೊಂಡ ಮಾಜಿ ಡಿಸಿಎಂ ಲಕ್ಷ್ಮಣ್ ಅವರಿಗೆ ಅಥಣಿ ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಲಾಗಿದೆ. ಈ ಮೂಲಕ 224 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ 209 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದಂತಾಗಿದೆ.
ಮೂರನೇ ಪಟ್ಟಿಯಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಜಗಳೂರಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಹಾಲಿ ಶಾಸಕರಿರುವ ಹರಿಹರ ಕ್ಷೇತ್ರಕ್ಕೆ ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ.ಹೊನ್ನಾಳಿಯಲ್ಲಿ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಗಳೂರಿನಲ್ಲಿ ಮಾಜಿ ಶಾಸಕ ಎಚ್.ಪಿ. ರಾಜೇಶ್ ಬದಲಿಗೆ ಬಿ. ದೇವೇಂದ್ರಪ್ಪಗೆ ಟಿಕೆಟ್ ನೀಡಲಾಗಿದೆ. ಎಚ್.ಪಿ. ರಾಜೇಶ್ ಬಂಡಾಯ ಸಾರುವ ಸಾಧ್ಯತೆ ಹೆಚ್ಚಿದೆ.
ಜಗಳೂರಿನಲ್ಲಿ ಎಚ್.ಪಿ. ರಾಜೇಶ್, ಕೆ.ಪಿ. ಪಾಲಯ್ಯ ಮತ್ತು ಬಿ. ದೇವೇಂದ್ರಪ್ಪ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆದಿತ್ತು. ದೇವೇಂದ್ರಪ್ಪ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ರಾಜೇಶ್ ತನ್ನ ಬೆಂಬಲಿಗರ ಸಭೆ ಕರೆದು ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಹರಿಹರ ಹೊರತುಪಡಿಸಿ ಉಳಿದ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಂತಿಮಗೊಂಡಂತಾಗಿದೆ. ಹರಿಹರದಲ್ಲಿ ಎಸ್. ರಾಮಪ್ಪ ಹಾಲಿ ಶಾಸಕರಾಗಿದ್ದರೂ ಅವರಿಗೆ ಟಿಕೆಟ್ ಘೋಷಣೆಯಾಗಿಲ್ಲ.
ಹೊನ್ನಾಳಿಯಲ್ಲಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಸಿದ್ದಪ್ಪ, ಉಮಾಪತಿ, ದೊಡ್ಡೇರಿ ವಿಶ್ವನಾಥ್ ಅವರು ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಹಾಕಿದ್ದರು. ಹರಿಹರದಲ್ಲಿ ಶಾಸಕ ಎಸ್. ರಾಮಪ್ಪ, ನಂದಿಗಾವಿ ಶ್ರೀನಿವಾಸ್ ಎಚ್.ಎನ್., ಎಂ. ನಾಗೇಂದ್ರಪ್ಪ, ಎಚ್. ಮಹೇಶ್ವರಪ್ಪ ಅವರು ಟಿಕೆಟ್‌ಗೆ ಲಾಬಿ ನಡೆಸಿದ್ದಾರೆ. ಟಿಕೆಟ್ ಸಿಗದವರು ಬಂಡಾಯ ಏಳುವ ಮುನ್ಸೂಚನೆ ನೀಡಿದ್ದಾರೆ. ಟಿಕೆಟ್ ಸಿಗದೇ ಇದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ.