ದಾವಣಗೆರೆ: ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವತಿಯಿಂದ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಪೆಟ್ರೋಲ್ , ಡಿಸೇಲ್, ಅಡುಗೆ ಅನಿಲ ಹಾಗೂ ದಿನ ನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಫೆ.11 ರಂದು ಬೃಹತ್ ಪ್ರತಿಭಟನೆ ನಡೆಯಲಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 11-30 ಕ್ಕೆ ಅಂಬೇಡ್ಕರ್ ವೃತ್ತದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಜಯದೇವ ವೃತ್ತ, ಮಹಾತ್ಮಗಾಂಧಿ ವೃತ್ತ, ಪಿ.ಬಿ.ರಸ್ತೆ ಮೂಲಕ ಮಹಾನಗರ ಪಾಲಿಕೆ ಮುಂಭಾಗ ಆಗಮಿಸಲಿದೆ. ನಂತರ ಬಹಿರಂಗ ಸಭೆ ನಡೆಯಲಿದ್ದು, ಸಭೆ ನಂತರ ಮಾನ್ಯ ಉಪ ವಿಭಾಗಾಧಿಕಾರಿಗಳೀಗೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ತಿಳಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಶಾಸಕರು, ಮಹಾನಗರ ಪಾಲಿಕೆ ಹಾಲಿ/ ಮಾಜಿ ಸದಸ್ಯರುಗಳು, ಬ್ಲಾಕ್ ಸಮಿತಿ ಪದಾಧಿಕಾರಿಗಳು, ವಾರ್ಡ್ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಪಕ್ಷದ ವಿವಿಧ ಘಟಕಗಳಾದ ಎನ್‍ಎಸ್‍ಯುಐ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಜಿಲ್ಲಾ ಸೇವಾದಳ, ಕಿಸಾನ್ ಕಾಂಗ್ರೆಸ್, ಕಾರ್ಮಿಕ ವಿಭಾಗ, ಪರಿಶಿಷ್ಟ ಜಾತಿ, ಪಂಗಡ, ಓ.ಬಿ.ಸಿ. ವಿಭಾಗದ ಎಲ್ಲಾ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ, ಎಪಿಎಂಸಿ ಸದಸ್ಯರುಗಳು ಪದಾಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಳ್ಳುವ ಮೂಲಕ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಿದ್ದಾರೆ.



