ದಾವಣಗೆರೆ: ಜುಲೈ ಮೊದಲ ವಾರದಲ್ಲಿ ಎಲ್ಲ ಏಳು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನವಸಂಕಲ್ಪ ಚಿಂತನಾ ಶಿಬಿರ ಆಯೋಜಿಸಲಾಗುವುದು ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಎಂ.ಸಿ. ವೇಣುಗೋಪಾಲ್ ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪಕ್ಷದ ಸಂಘಟನೆ, ಕ್ಷೇತ್ರದ ಸಮಸ್ಯೆ, ಮುಂದಿನ ಹೋರಾಟ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲು ನವ ಸಂಕಲ್ಪ ಚಿಂತನಾ ಶಿಬಿರ ಆಯೋಜಿಸಲಾಗುವುದು. ದಾವಣಗೆರೆಯಲ್ಲಿ ನಡೆದ ಚಿಂತನಾ ಶಿಬಿರದಲ್ಲಿ ಪಕ್ಷದ ಶಾಸಕರು, ಮಾಜಿ ಶಾಸಕರು, ಬ್ಲಾಕ್ ಅಧ್ಯಕ್ಷರು, ಉಪಾಧ್ಯಕ್ಷರು, ಮುಖಂಡರ ಸಲಹೆ, ಅಭಿಪ್ರಾಯ ಮಂಡಿಸಿದರು. ಅವು ಎಲ್ಲವನ್ನೂ ಕೆಪಿಸಿಸಿ ಗಮನಕ್ಕೆ ತರಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ದಾವಣಗೆರೆ ಜಿಲ್ಲೆಗೆ ಕಾರ್ಯಕ್ರಮ ಉದ್ಘಾಟನೆಗೆ ಪ್ರವಾಸ ರೀತಿ ಬಂದು ಹೋಗುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದಾರೆ ಅವರಿಗೆ ಮಂತ್ರಿಯಾಗಲು ಅರ್ಹತೆ, ಯೋಗ್ಯತೆ ಇಲ್ಲವೇ … ? ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಿರುವ ಕಾಮಗಾರಿ ಉದ್ಘಾಟನೆಗೆ ಬರುತ್ತಾರೆ ಹೊರತು ಯಾವುದೇ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲು ಬರುತ್ತಿಲ್ಲ.ಯಾವುದೇ ವಿಧಾನ ಸಭಾ ಕ್ಷೇತ್ರದಲ್ಲಿ ಜನಸ್ಪಂದನಾ ಸಭೆ ನಡೆಸಿ ಜನರ ಸಮಸ್ಯೆ ಕೇಳುತ್ತಿರಲಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಡಿ. ಬಸವರಾಜ್, ನಿಖಿಲ್ ಕೊಂಡಜ್ಜಿ, ಹೊದಿಗೆರೆ ರಮೇಶ್, ಬಿ.ಎಚ್. ವೀರಭದ್ರಪ್ಪ, ಡೋಲಿ ಚಂದ್ರಶೇಖರ್, ಎಸ್. ಮಲ್ಲಿಕಾರ್ಜುನ ಉಪಸ್ಥಿತರಿದ್ದರು.