ದಾವಣಗೆರೆ: ಕಾಂಗ್ರೆಸ್ ಪಕ್ಷ ವಿರೋಧಿ ಚಟುವಟಿಕೆ ನಡೆಸುವ ನಾಯಕರಿಗೆ ವೇದಿಕೆ ಕಲ್ಪಿಸಿಕೊಟ್ಟ ಕಾಂಗ್ರೆಸ್ ಪಕ್ಷದ ಎಂಎಲ್ ಸಿ ಅಬ್ದುಲ್ ಜಬ್ಬಾರ್ ವಿರುದ್ಧ ವರಿಷ್ಠರಿಗೆ ವರದಿ ನೀಡಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್. ಬಿ. ಮಂಜಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಜಬ್ಬಾರ್ ಅವರ ಅಭಿನಂದನೆ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ವಿರೋಧಿ ಚಟುವಟಿಕೆ ನಡೆಸುವ ನಾಯಕರಿಗೆ ವೇದಿಕೆ ಕಲ್ಪಿಸಿ ಕೊಟ್ಟಿದ್ದಾರೆ. ಈ ಮೂಲಕ ಜವಾಬ್ದಾರಿ ವಹಿಸಿ ಕಾರ್ಯಕ್ರಮ ನಡೆಸಬೇಕಿದ್ದ ಎಂಎಲ್ ಸಿ ಅಬ್ದುಲ್ ಜಬ್ಬಾರ್ ವಿಫಲವಾಗಿದ್ದಾರೆ. ಪಕ್ಷ ವಿರೋಧಿ ನಾಯಕರು ಜಿಲ್ಲೆಯ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಮಲ್ಲಿಕಾರ್ಜುನ ವಿರುದ್ಧ ಏಕ ವಚನದಲ್ಲಿ ಮಾತನಾಡಿದ್ದರೂ, ವೇದಿಕೆ ಮೇಲಿದ್ದ ಜಬ್ಬಾರ್ ಅದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಈ ಬಗ್ಗೆ ಜಿಲ್ಲಾಧ್ಯಕ್ಷನಾಗಿ ನಾನು ಪಕ್ಷದ ವರಿಷ್ಠರಿಗೆ ವರದಿ ನೀಡುತ್ತೇನೆ. ಜಬ್ಬಾರ್ ವಿರುದ್ಧ ಪಕ್ಷದ ವರಿಷ್ಠರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ವೈ ರಾಮಪ್ಪ ವಿರುದ್ಧ ಈಗಾಗಲೇ ಶಿಸ್ತುಬಕ್ರಮ ಕೈಗೊಳ್ಳಲಾಗಿದ್ದು, ಅವರು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಅವರ ಹುಚ್ಚಾಟದಿಂದಲೇ ಪಕ್ಷದಿಂದ ಉಚ್ಚಾಟನೆ ಆಗಿದ್ದಾರೆ. ಜಿಲ್ಲೆಯ ಹಿರಿಯ ನಾಯಕರ ಬಗ್ಗೆ ಮಾತನಾಡುವ ಯೋಗ್ಯತೆ ಇದ್ದರೆ ಮಾತನಾಡಬೇಕು. ಹಾದಿ ಬೀದಿಯಲ್ಲಿ ನಿಂತು ಮಾತನಾಡುವ ನಾಯಕರಿಗೆ ಶಾಮನೂರು ಶಿವಶಂಕರಪ್ಪ ಮತ್ತು ಮಲ್ಲಿಕಾರ್ಜುನ ವಿರುದ್ಧ ಮಾತನಾಡುವ ಯೋಗ್ಯತೆ ಇಲ್ಲ. ಪಕ್ಷದ ವಿರುದ್ಧ ಮಾತನಾಡುವ ನಾಯಕರಿಗೆ ಗ್ರಾಮ ಪಂಚಾಯತಿಯಲ್ಲಿ ನಿಂತು ಗೆಲ್ಲುವ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ದಾವಣಗೆರೆ ದಕ್ಷಿಣದಿಂದ ನಿಲ್ಲಬೇಕು ಎಂದು ಹೇಳಲು ಇವರು ಯಾರು…? ಅದನ್ನು ನಿರ್ಧರಿಸುವವರು ಪಕ್ಷದ ವರಿಷ್ಠರು. ಇಂತಹ ಗೊಂದಲದ ಹೇಳಿಕೆ ನೀಡುವ ಮೂಲಕ ಪಕ್ಷದ ಜವಾಬ್ದಾರಿ ನಿರ್ವಹಿಸುವಲ್ಲಿ ಎಂಎಲ್ ಸಿ ಜಬ್ಬಾರ್ ವಿಫಲವಾಗಿದ್ದಾರೆ. ಇದಲ್ಲದೆ, ಕಾಂಗ್ರೆಸ್ ನಿಂದ ಉಚ್ಚಾಟನೆ ಹೊಂದಿದವರಿಗೆ ವೇದಿಕೆ ಕಲ್ಪಿಸಿಕೊಟ್ಟು ಪಕ್ಷ ವಿರೋಧಿ ಕೆಲಸ ಮಾಡಿದ ಜಬ್ಬಾರ್ ವಿರುದ್ಧ ಪಕ್ಷಕ್ಕೆ ವರದಿ ನೀಡುತ್ತೇನೆ ಎಂದರು.