ದಾವಣಗೆರೆ: ಮುಂಬರುವ ಲೋಕಸಭೆ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್ ನಾನು ಕೂಡ ಟಿಕೆಟ್ ಆಕಾಂಕ್ಷಿ ಎಂದು ಹರಿಹರ ಮಾಜಿ ಶಾಸಕ ಎಸ್. ರಾಮಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಈಶ್ವರ್ ಖಂಡ್ರೆ ಅವರು ಬಂದಾಗ ನಾನು ಅರ್ಜಿ ಸಲ್ಲಿಸಿದ್ದೇನೆ. ಒಂದು ವೇಳೆ ಹೈಕಮಾಂಡ್ ನನಗೆ ಟಿಕೆಟ್ ನೀಡದೇ ಬೇರೆ ಯಾರಿಗೆ ಟಿಕೆಟ್ ಕೊಟ್ಟರೆ ಅವರ ಗೆಲುವಿಗೆ ಶ್ರಮಿಸುತ್ತೇನೆ . ನಾನು ಸೇರಿ, ಹೆಚ್. ಬಿ. ಮಂಜಪ್ಪ, ವಿನಯ್ ಕುಮಾರ್, ಚನ್ನಯ್ಯ ಒಡೆಯರ್ ಪುತ್ರ ಶಿವಕುಮಾರ್ ಅರ್ಜಿ ಸಲ್ಲಿಸಿದ್ದಾರೆ ಎಂದರು.
ವಿನಯ್ ಕುಮಾರ್ ಇನ್ನೂ ಯುವಕ. ಮೂರ್ನಾಲ್ಕು ತಿಂಗಳಿನಿಂದ ಮಾತ್ರ ಓಡಾಡುತ್ತಿದ್ದಾರೆ. ನಾನು 25 ರಿಂದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದ್ದೇವೆ. ಕ್ಷೇತ್ರದಲ್ಲಿ ಎಲ್ಲ ಕಡೆ ನನ್ನ ಮುಖ ಪರಿಚಯವಿದೆ.ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಗೆಲುವಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಂದಿಗಾವಿ ಶ್ರೀನಿವಾಸ್ ಹೊಸದಾಗಿ ಪಕ್ಷಕ್ಕೆ ಬಂದಿದ್ದರೂ ಪಕ್ಷದ ಹೈಕಮಾಂಡ್ ಟಿಕೆಟ್ ನೀಡಿತ್ತು. ನಾನು ಹಾಲಿ ಶಾಸಕನಾಗಿದ್ದರೂ ಟಿಕೆಟ್ ಕೊಟ್ಟಿರಲಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ
ಡಿ. ಕೆ. ಶಿವಕುಮಾರ್ ಅವರು ಭೇಟಿ ಮಾಡಿ ನನ್ನ ಅಭಿಪ್ರಾಯ ಹೇಳಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ, ಲೋಕಸಭೆಗೆ ನೀಡಿ ಎಂದು ಮನವಿ ಮಾಡಿದ್ದೇನೆ ಎಂದರು.
ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರು ಅರ್ಜಿ ಸಲ್ಲಿಸಿಲ್ಲ.ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಅಂತಿಮ ನಿರ್ಧಾರ ಏನಿದ್ದರೂ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಇದಕ್ಕೆ ಎಲ್ಲರೂ ತಲೆಬಾಗಲೇಬೇಕಾಗುತ್ತದೆ ಎಂದು ತಿಳಿಸಿದರು.
ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಪಕ್ಷದ ವರಿಷ್ಠರು ಅಂತಿಮವಾಗಿ ನಿರ್ಧರಿಸುತ್ತಾರೆ. ಸದ್ಯಕ್ಕೆ 25 ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಹುದ್ದೆ ಸಿಗುತ್ತದೆ. ಮಾಜಿ ಶಾಸಕರ ಪಟ್ಟಿಯಲ್ಲಿ ನನ್ನ ಹೆಸರು ಮೊದಲ ಸ್ಥಾನದಲ್ಲಿದೆ ಎಂದರು.