ದಾವಣಗೆರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಶೈವ ಲಿಂಗಾಯತ ಸಮುದಾಯದ ಬಗ್ಗೆ ಆಡಿದ ಮಾತು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಅದನ್ನು ಯಾರೂ ತಿರುಚಲು ಸಾಧ್ಯವಿಲ್ಲ. ಪತ್ರಿಕೆಯಲ್ಲಿ ಬರೆದಾಗ ತಿರುಚಿದ್ದಾರೆ ಎಂದು ಹೇಳುತ್ತಿದ್ದರು. ಈಗ ಪರಿಸ್ಥಿತಿ ಆ ರೀತಿ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ಹರಿಹರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿಡಿಯೋದಲ್ಲಿ ಮಾತನಾಡಿರುವುದು ಸ್ಟಷ್ಟವಾಗಿದೆ. ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಯಾರು ದಡ್ಡರಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ವೀರಶೈವ ಲಿಂಗಾಯತರ ಸಭೆ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಈ ಹಿಂದೆ ಯಾವ ರೀತಿ ಕಾರ್ಯತಂತ್ರ ರೂಪಿಸುತ್ತಿದ್ದಾರೋ ಅದೇ ರೀತಿಯಲ್ಲಿ ಈ ಬಾರಿಯೂ ಯೋಜನೆ ರೂಪಿಸುತ್ತಿದ್ದಾರೆ .ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ರಾಜನಾಥ್ ಸಿಂಗ್ ಸೇರಿದಂತೆ ರಾಷ್ಟ್ರೀಯ ನಾಯಕರು ಬರುತ್ತಾರೆ. ಈಗಾಗಲೇ ಅಮಿತ್ ಶಾ ಬಂದಿದ್ದಾರೆ. ಲಿಂಗಾಯತ ಸಿಎಂ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಎಲ್ಲಾ ವಿಚಾರಗಳು ಗಮನದಲ್ಲಿರುತ್ತವೆ. ಚುನಾವಣಾ ಫಲಿತಾಂಶ ಬಂದ ಬಳಿಕ ನಿರ್ಧಾರವಾಗಲಿದೆ ಎಂದು ಹೇಳಿದರು.
ಈ ಬಾರಿ ಬಿಜೆಪಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಸಬರಿಗೆ ಅವಕಾಶ ಕೊಡಲಾಗಿದೆ. ಶೇಕಡಾ 80 ರಿಂದ 90ರಷ್ಟು ಬಂಡಾಯ ಎದ್ದವರು ನಾಮಪತ್ರ ವಾಪಸ್ ಪಡೆಯುತ್ತಾರೆ. ನಾನು ಕಳೆದ ಎರಡು ದಿನಗಳಿಂದ ಮಾತುಕತೆ ನಡೆಸಿದ್ದೇನೆ. ಲಿಂಗಾಯತ ಮತಗಳು ಕಳೆದ ಬಾರಿಗಿಂತ ಈ ಬಾರಿ ಜಾಸ್ತಿಯಾಗುತ್ತದೆ. ಇನ್ನು ಚನ್ನಗಿರಿಯಲ್ಲಿ ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರರಾಗಿ ಕಣಕ್ಕಿಳಿದಿರುವ ಮಾಡಾಳ್ ಮಲ್ಲಿಕಾರ್ಜುನ್ ನನ್ನಸಂಪರ್ಕದಲ್ಲಿ ಇಲ್ಲ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರು ಹೇಳಿದಂತೆ ಎಲ್ಲರೂ ಮತ ಹಾಕುವುದಿಲ್ಲ ಎನ್ನುವುದು ನನ್ನ ಭಾವನೆ. ಧರ್ಮ, ಜಾತಿ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಮಾತನಾಡುವುದಿಲ್ಲ ಎಂದರು.