ದಾವಣಗೆರೆ: ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ವರೆಗೆ ನಾಗರಿಕ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆ ಕಾರ್ಯವನ್ನು ಕೈಗೊಂಡಿದ್ದು, ಗಣತಿದಾರರು ಮನೆಗೆ ಬಂದಾಗ ನಾಗರೀಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಮನವಿ ಮಾಡಿದರು.
ನಗರದ ಎಸ್.ಎಸ್. ಬಡಾವಣೆ ಬಿ ಬ್ಲಾಕ್‍ನಲ್ಲಿನ 12 ನೇ ಕ್ರಾಸ್ ಒಳಾಂಗಣ ಕ್ರೀಡಾಂಗಣದ ಮುಂಭಾಗದ ಮನೆಯಲ್ಲಿ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಸುಮಾರು 4462 ಬ್ಲಾಕ್ಸ್ ಗಳಿದ್ದು, ಅಗತ್ಯತೆಗಳಿಗೆ ಅನುಗುಣವಾಗಿ ಗಣತಿದಾರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸಿಬ್ಬಂದಿಗಳಿಗೆ ಸೂಕ್ತ ತರಬೇತಿಯನ್ನು ನೀಡಲಾಗಿದೆ. ಸಮೀಕ್ಷೆಗಾಗಿ ಹಿಂದುಳಿದ ವರ್ಗದ ಆಯೋಗದಿಂದ ಆಪ್ ಸಹ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಜನರಿಗೆ ಸುಲಭವಾಗಿ ಸಮೀಕ್ಷೆಗೆ ಸಹಕರಿಸಲು ಸಾಧ್ಯವಾಗುತ್ತದೆ. ಸಮೀಕ್ಷೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಯಾವುದೇ ರೀತಿಯ ಗೊಂದಲ ಅಥವಾ ಸಮಸ್ಯೆ ಇದ್ದಲ್ಲಿ ನೊಡೆಲ್ ಅಧಿಕಾರಿಗಳಾದ ಉಪ ವಿಭಾಗಾಧಿಕಾರಿ, ತಹಶೀಲ್ದಾರ್ , ಮಹಾನಗರ ಪಾಲಿಕೆ ಆಯುಕ್ತರು ಮತ್ತು ಕಾರ್ಯ ನಿರ್ವಾಹಕ ಅಧಿಕಾರಿಗಳ ಬಳಿ ಪರಿಹರಿಸಿಕೊಳ್ಳುವಂತೆ ತಿಳಿಸಿದರು.
150 ಕುಟುಂಬಗಳಿಗೆ ಒಬ್ಬ ಗಣತಿದಾರರು
ಗಣತಿದಾರರು ಮನೆ ಬಳಿ ಬಂದಾಗ ಸಾಕು ನಾಯಿಗಳನ್ನು ಸುರಕ್ಷಿತವಾಗಿಟ್ಟುಕೊಂಡು ಸಮೀಕ್ಷೆಗೆ ಸಹಕರಿಸಬೇಕು, 150 ಕುಟುಂಬಗಳಿಗೆ ಒಬ್ಬ ಗಣತಿದಾರರು ಮತ್ತು 20 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರುಗಳನ್ನು ನೇಮಕ ಮಾಡಲಾಗಿದೆ. ಗಣತಿದಾರರು ಪ್ರತಿದಿನ 15 ರಿಂದ 20 ಮನೆಗಳ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಲಿದ್ದು ಪ್ರತಿ ಮನೆಯ ಗಣತಿ 30 ರಿಂದ 40 ನಿಮಿಷಗಳ ಅವಧಿ ತೆಗೆದುಕೊಳ್ಳಲಿದೆ. ಜಿಲ್ಲೆಯಲ್ಲಿ ನಿಗದಿತ ಅವಧಿಗಿಂತ ಮೊದಲೇ ಸಮೀಕ್ಷಾ ವರದಿಯನ್ನು ನೀಡಲು ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಸಮೀಕ್ಷಾ ಕಾರ್ಯ ಆರಂಭವಾಗುವುದಿಂದ ಈಗಾಗಲೇ ಕುಟುಂಬಗಳ ಸಂಖ್ಯೆ ಹಾಗೂ ಬೆಸ್ಕಾಂ ಇಲಾಖೆ ಸಹಯೋಗದೊಂದಿಗೆ ಆರ್.ಆರ್. ಸಂಖ್ಯೆಗೆ ಅನುಗುಣವಾಗಿ ಚನ್ನಗಿರಿಯಲ್ಲಿ 86,897 ಕುಟುಂಬಗಳು, ದಾವಣಗೆರೆ 2,34,481, ಹರಿಹರದಲ್ಲಿ 69,053 ಜಗಳೂರು 40,192, ಹೊನ್ನಾಳಿ 39,024 ಮತ್ತು ನ್ಯಾಮತಿಯಲ್ಲಿ 22,334 ಸೇರಿದಂತೆ ಒಟ್ಟು 4,91,981 ಆರ್.ಆರ್ ಕುಟುಂಬಗಳಿಗೆ ಜಿಯೋಟ್ಯಾಗ್ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದರು.
ಸಮೀಕ್ಷೆಗೆ ಮೊಬೈಲ್ ಆ್ಯಪ್ ಅಭಿವೃದ್ಧಿ
ಈ ಸಮೀಕ್ಷೆನ್ನು ಭೌತಿಕವಾಗಿ ಆಪ್‍ಲೈನ್ ಮತ್ತು ಆನ್ಲೈನ್ ಮೂಲಕ ನಡೆಸಲು ಮೊಬೈಲ್ ಆಪ್ ಕೂಡ ಸಿದ್ದಪಡಿಸಲಾಗಿದೆ. ತುಂಬಾ ಸುಲಭವಾಗಿದ್ದು, ಮೊಬೈಲ್ ಆಪ್‍ನಲ್ಲಿಯೇ ಮಾಹಿತಿಯನ್ನು ಸಲ್ಲಿಸಬಹುದು. ಸರ್ವೇ ಮಾಡುವ ಸಂದರ್ಭದಲ್ಲಿ ಏನಾದರೂ ತಾಂತ್ರಿಕ ದೋಷ ಅಥವಾ ಸಮಸ್ಯೆಗಳು ಉಂಟಾದಲ್ಲಿ ಸ್ಥಳದಲ್ಲಿಯೇ ಪರಿಹರಿಸಲಾಗುವುದು.
ಈ ವೇಳೆ ಉಪ ವಿಭಾಗಾಧಿಕಾರಿ ಸಂತೋಷ್ ಪಾಟೀಲ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹಾಂತೇಶ್, ಪಾಲಿಕೆ ಆಯುಕ್ತೆ ರೇಣುಕಾ ಮತ್ತು ಡಿಡಿಪಿಐ ಕೊಟ್ರೇಶ್, ಹಿಂದುಳಿದ ವರ್ಗಗಳ ಅಧಿಕಾರಿ ರೇಣುಕಾದೇವಿ, ಬಿಇಓ ಉತ್ತರ ವಿಶಾಲಾಕ್ಷಿ, ಗಣತಿ ಸಿಬ್ಬಂದಿ ಭಾಗ್ಯಲಕ್ಷ್ಮಿ ಕೆ.ಆರ್. ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.



