ದಾವಣಗೆರೆ: ಚನ್ನಗಿರಿ ಪಟ್ಟಣದ ಕುಡಿಯುವ ನೀರಿಗಾಗಿ ನಗರಾಭಿವೃದ್ದಿ ಇಲಾಖೆಯಿಂದ ರೂ.5.47 ಕೋಟಿ ಮಂಜೂರು ಮಾಡಲಾಗಿದೆ ಎಂದು ನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದಭೈರತಿ ಬಸವರಾಜ ಹೇಳಿದರು.
ಚನ್ನಗಿರಿ ತಾಲ್ಲೂಕಿನ ತಣಿಗೆರೆ ಗ್ರಾಮದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಂತೆಬೆನ್ನೂರು ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಕಳೆದ 3 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಸರ್ಕಾರದಿಂದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಯೋಜನೆಯಡಿ ಪ್ರತಿಯೊಂದು ಗ್ರಾಮದಲ್ಲೂ ಜನರ ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಜನರು ಕುಡಿಯುವ ನೀರಿಗಾಗಿ ಪರದಾಡುವುದು ತಪ್ಪಲಿದೆ ಎಂದರು.
28.79 ಕೋಟಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮಗಳು ನೆರವೇರಿದ್ದು, ಶಾಸಕರ ಕಾಳಜಿಯಿಂದಾಗಿ ತಾಲ್ಲೂಕು ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವದ ನಮ್ಮ ಸರ್ಕಾರ ರಾಜ್ಯದ ಸಮಗ್ರ ಅಭಿವೃದ್ದಿ ದೃಷ್ಟಿಯಲ್ಲಿಟ್ಟುಕೊಂಡು ಕರೋನಾ ಸಂದರ್ಭದಲ್ಲೂ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗದಂತೆ ಕಾರ್ಯಕ್ರಮಗಳನ್ನು ನೀಡಿದೆ ಎಂದರು.
ಈ ಜನಸ್ಪಂದನ ಕಾರ್ಯಕ್ರಮದ ಮುಖ್ಯ ಉದ್ದೇಶ ಗ್ರಾಮಗಳ ಅಭಿವೃದ್ಧಿಯಾಗಿದೆ. ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ, ದೇವಸ್ಥಾನಗಳ ಜೀರ್ಣೋದ್ದಾರ, ಸಮುದಾಯ ಭವನಗಳ ನಿರ್ಮಾಣ, ಶಾಲೆಗಳ ನವೀಕರಣಕ್ಕಾಗಿ ಸರ್ಕಾರದಿಂದ ರೂ28.79 ಲಕ್ಷವನ್ನು ಮಂಜೂರು ಮಾಡಲಾಗಿದೆ ಎಂದರು.
ರೈತರು, ಬಡವರು, ಮತ್ತು ದೀನದಲಿತರಿಗಾಗಿ ಕೃಷಿಯಂತ್ರೋಪಕರಣಗಳನ್ನು, ಹಾಗೂ ಕೈಗಾಡಿಗಳನ್ನು ಫಲಾನುಭವಿಗಳಿಗೆ ವಿತರಿಸಿದ ಅವರು, ಗ್ರಾಮದ ಜನರಿಗೆ ಆರ್ಥಿಕವಾಗಿ ಸಬಲರಾಗಬೇಕಾದರೆ ಸರ್ಕಾರದಿಂದ ಬರುವ ಅನುದಾನದ ಸೌಲಭ್ಯ ಪಡೆದು ಸದುಪಯೋಗ ಪಡೆದುಕೊಳ್ಳಬೇಕು. ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಪಡೆದು ವ್ಯವಸಾಯಕ್ಕೆ ರೈತರು ಬಳಸಿಕೊಳ್ಳಬಹುದು ಎಂದರು.
ಈ ಬಾರಿಯ ಬಜೆಟ್‍ನಲ್ಲಿ ನಾವು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು ದಾವಣಗೆರೆ ಜಿಲ್ಲೆಯ ಚಿಗಟೇರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜು ಆರಂಭ ಮಾಡಲು ಚರ್ಚಿಸಲಾಗಿದೆ. ಹಾಗೂ ನಮ್ಮ ಜಿಲ್ಲೆಯಲ್ಲಿ ಕೃಷಿ ವಿಜ್ಞಾನ ಕಾಲೇಜು ಸ್ಥಾಪನೆಯಾಗಬೇಕು ಎಂದು ಅವರಲ್ಲಿ ಮನವಿ ಮಾಡಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಸ್.ಡಿ.ಎಲ್. ನ ಅಧ್ಯಕ್ಷರು ಹಾಗೂ ಚನ್ನಗಿರಿ ಕ್ಷೇತ್ರದ ಶಾಸಕ ಕೆ.ಮಾಡಾಳ್ ವಿರುಪಾಕ್ಷಪ್ಪ, ಜನರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಹುಡುಕುವ ಬದಲಾಗಿ ಅವರೇ ಜನರ ಬಳಿ ಬಂದಾಗ ಸಮಸ್ಯೆಗಳು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ತಿಳಿಯುತ್ತದೆ ಇದರಿಂದ ನಾವು ಮಾಡಬೇಕಾಗಿರುವ ಕೆಲಸದ ಅರಿವು ನಮಗಾಗುತ್ತದೆ ಎಂದರು.
ಅಧಿಕಾರಿಗಳ ಭೇಟಿಗೆ ಸಾಮಾನ್ಯ ಜನ ತೆರಳಿದರೆ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿಯಿದೆ. ಬದಲಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರ ನಡುವೆ ಇದ್ದಲ್ಲಿ ಜನರ ಕಷ್ಟ-ಸುಖಗಳನ್ನು ಮಕ್ತವಾಗಿ ಗ್ರಹಿಸುವ ಮತ್ತು ಅವರ ಬೇಡಿಕೆಗಳನ್ನು ಈಡೇರಿಸಲು ಈ ಕಾರ್ಯಕ್ರಮದಿಂದ ಸಾಧ್ಯವಾಗಲಿದೆ. ಇಂದು ಸರ್ಕಾರ ಮತ್ತು ಅಧಿಕಾರಿಗಳು ನಿಮ್ಮ ಬಳಿಗೆ ಬಂದು ಸುಮಾರು ರೂ. 37.70 ಲಕ್ಷಗಳ ವಿವಿಧ ಪ್ರಯೋಜನಗಳನ್ನು ವಿತರಿಸಲಾಗಿದೆ. ಹಾಗೂ 60 ವರ್ಷ ಮೇಲ್ಪಟ್ಟಂತಹ ಜನರನ್ನು ಅಧಿಕಾರಿಗಳೇ ಗುರುತು ಮಾಡಿ ಅವರಿಗೆ ಮುಂದಿನ ತಿಂಗಳಿಂದಲೇ ಮಾಶಾಸನ ನೀಡುವಂತೆ ನಿರ್ದೇಶನ ನೀಡಲಾಗಿದೆ ಎಂದರು.
ಇಂದು ಬಹಳ ಜನ ರೈತರು ಬಗರ್ ಹುಕುಂ ಸಾಗುವಳಿ ಮಾಡಿದ್ದು ಅಂತಹವರಿಗೆ ಸರ್ಕಾರದ ಜಮೀನನ್ನು ಕೊಡಲು ಅವಕಾಶವಿದ್ದರೆ ಹಾಗೂ ಅರಣ್ಯ ಇಲಾಖೆಯ ಆಕ್ಷೇಪಣೆ ಇಲ್ಲದಿದ್ದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಮರಡಿ ಗ್ರಾಮದಲ್ಲಿ 1965-66 ನೇ ಸಾಲಿನಲ್ಲಿ ನೀಲಕಂಠಪ್ಪ ಎಂಬುವರು ಕೈಗಾರಿಕೆ ಸ್ಥಾಪನೆ ಉದ್ದೇಶದಿಂದ ಸುಮಾರು 40 ರಿಂದ 50 ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಂಡಿದ್ದು ಇದುವರೆಗೂ ಯಾವುದೇ ಕೈಗಾರಿಕೆ ಸ್ಥಾಪನೆಯಾಗಿಲ್ಲ. ಇಂದಿಗೂ ಆ ಪ್ರದೇಶ ಕೈಗಾರಿಕೆ ಪ್ರದೇಶವಾಗಿಯೇ ಉಳಿದಿದೆ. ಆ ಪ್ರದೇಶವನ್ನು ಬಗರ್ ಹುಕುಂ ಸಾಗುವಳಿದಾರರಿಗೆ ವಿತರಿಸಲು ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ ಈ ಕಾರ್ಯಕ್ರಮದ ಮೂಲಕ ಜನರು ತಾಲ್ಲೂಕು ಮತ್ತು ಜಿಲ್ಲಾ ಕಚೇರಿಗಳ ಬಳಿ ಹಾಗೂ ವಿವಿಧ ಇಲಾಖೆಗಳಿಗೆ ಅಲೆದಾಡುವುದನ್ನು ತಪ್ಪಿಸಿ ಇಲಾಖೆಗಳೇ ನಿಮ್ಮ ಮನೆ ಬಾಗಿಲಿಗೆ ಬಂದು ವಿವಿಧ ಸರ್ಕಾರದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೀಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮವನ್ನು ಆಯೋಜಿಸಿ ಅಲ್ಲಿನ ಗ್ರಾಮಗಳ ಜನರ ಸಮಸ್ಯೆಗಳನ್ನು ಪರಿಶೀಲಿಸಿದರೆ ಪರಿಹಾರ ನೀಡಲು ನೆರವಾಗುತ್ತದೆ. ಸರ್ಕಾರದ ಮತ್ತೊಂದು ಯೋಜನೆಯಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಇಂತಹ ಕಾರ್ಯಕ್ರಮಗಳ ಮೂಲಕ ಸರ್ಕಾರ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ಫಲಾನುಭವಿಗಳಿಗೆ ಸೌಲಭ್ಯ ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯೆಕ್ಷೆ ಕೆ.ವಿ.ಶಾಂತಕುಮಾರಿ, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ್, ಚನ್ನಗಿರಿ ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಕವಿತಾ ಕಲ್ಲೇಶ್, ತಾಲ್ಲೂಕು ಪಂಚಾಯಿತಿ ಉಪಾಧ್ಯೆಕ್ಷೆ ಚಂದ್ರಮ್ಮ ರುದ್ರಪ್ಪ, ತಣಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಾಣಿ ಪ್ರಕಾಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಮುಖ್ಯ ಕಾರ್ಯನಿರ್ವಹಕಾಧಿಕಾರಿ ವಿಜಯ ಮಹಾಂತೇಶ ಬಿ ದಾನಮ್ಮನವರ್, ಉಪವಿಭಾಗಾಧಿಕಾರಿ ಮಮತ ಹೊಸಗೌಡರ, ಪ್ರಭಾರ ಪೊಲೀಸ್ ಉಪಾಧೀಕ್ಷಕ ಬಸವರಾಜ್ ಬಿ ಎಸ್, ಚನ್ನಗಿರಿ ತಹಶೀಲ್ದಾರ್ ಡಾ. ಪಟ್ಟರಾಜ ಗೌಡ ಮುಂತಾದವರು ಉಪಸ್ಥತಿತರಿದ್ದರು.