ಚಿತ್ರದುರ್ಗ: ನಿರುದ್ಯೋಗಿಗಳಿಗೆ ಕೆಎಸ್ ಆರ್ ಟಿಸಿ ಯಲ್ಲಿ ನೌಕರಿ ಆಸೆ ತೋರಿಸಿ 500 ಜನರಿಗೆ ವಂಚಿಸಿ, 70 ಲಕ್ಷ ರೂಪಾಯಿ ಲಪಟಾಯಿಸಿದ ಖತರ್ನಾಕ್ ಗ್ಯಾಂಗ್ ನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
ಐದು ಜನ ವಂಚಕರ ಬಂಧಿಸಲಾಗಿದೆ. ವಂಚನೆಯಲ್ಲಿ ಭಾಗಿಯಾಗಿದ್ದ ಬಾಗಲಕೋಟೆಯ ಮಹಮ್ಮದ್ ಸಾಬ್, ವಿಜಯಪುರದ ಬಸವರಾಜ್, ಬಾಗಲಕೋಟೆಯ ವೀರಭದ್ರಪ್ಪ, ವಿಜಯನಗರ ಜಿಲ್ಲೆಯ ಮಂಜುನಾಥ, ಬೆಂಗಳೂರಿನ ಅನಿಲ್ ಹೊಸದುರ್ಗ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 12ಲಕ್ಷ 40ಸಾವಿರ ರೂ. ನಗದು ಹಾಗೂ ಕಾರು ವಶಕ್ಕೆ ಪಡೆದಿದ್ದಾರೆ.
ಸಾರಿಗೆ ಇಲಾಖೆಯಲ್ಲಿ 2019ರಲ್ಲಿ ಸಂಚಾರಿ ನಿರೀಕ್ಷಕರು ಹಾಗೂ ಸಹಾಯಕ ಸಂಚಾರಿ ನಿರೀಕ್ಷಕರ ಹುದ್ದೆಗಳನ್ನು ಕರೆಯಲಾಗಿದೆ. ಸಾರಿಗೆ ಇಲಾಖೆ ಸೇರಿದಂತೆ ಸರ್ಕಾರದ ಮಟ್ಟದಲ್ಲಿ, ವಿಧಾನಸೌಧ ಮತ್ತು ವಿಕಾಸ ಸೌಧದಲ್ಲಿ ನಮಗೆ ಅನೇಕ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಹಣ ನೀಡಿದರೆ ನೌಕರಿ ಮಾಡಿಸಿಕೊಡುತ್ತೇವೆ ಎಂದು ವಂಚಕರ ಗ್ಯಾಂಗ್ ಉದ್ಯೋಗಾಕಾಂಕ್ಷಿಗಳಿಗೆ ಬಲೆ ಬೀಸಿದೆ. ಪರಿಣಾಮ ರಾಜ್ಯದ ವಿವಿಧೆಡೆ ಸುಮಾರು 500 ಜನ ಉದ್ಯೋಗಾಕಾಂಕ್ಷಿಗಳು ವಂಚಕರ ಮೋಸದ ಜಾಲಕ್ಕೆ ಬಲಿಯಾಗಿ ಹಣ ಕಳೆದುಕೊಂಡಿದ್ದಾರೆ.
ಹಣ ಲಪಟಾಯಿಸಿದ್ದು ಅಷ್ಟೇ ಅಲ್ಲದೆ, ಉದ್ಯೋಗಾಕಾಂಕ್ಷಿಗಳ ದಾಖಲೆಗಳನ್ನು ಪಡೆದಿದ್ದಾರೆ. ಬಳಿಕ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಕೆಎಸ್ಆರ್ಟಿ ತರಬೇತಿ ಕೇಂದ್ರದ ಮುಂಭಾಗದ ಪ್ರವಾಸಿ ಮಂದಿರಕ್ಕೆ ಕರೆಸಿ ಸಂದರ್ಶನದ ನಾಟಕ ನಡೆಸಿದ್ದಾರೆ. ಜೊತೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆಸಿಕೊಂಡು ಮೆಡಿಕಲ್ ಟೆಸ್ಟ್ ಸಹ ಮಾಡಿಸಿದ್ದಾರೆ. ನಕಲಿ ಆದೇಶ ಪತ್ರಗಳನ್ನು ನೀಡಿ ಕಳುಹಿಸಿದೆ. ವಂಚಕರು ನೀಡಿದ ನಕಲಿ ಆದೇಶ ಪತ್ರಗಳನ್ನು ಹಿಡಿದು ನೌಕರಿಗೆಂದು ಸಾರಿಗೆ ಇಲಾಖೆ ಕಚೇರಿಗೆ ಹೋದಾಗ ಸತ್ಯಾಂಶ ಬಯಲಾಗಿದೆ.
ಹೊಸದುರ್ಗದ ಅಭಿಷೇಕ್ ಎಂಬುವರು ಅಕ್ಟೋಬರ್ 9ರಂದು ಈ ಬಗ್ಗೆ ದೂರು ನೀಡಿದ್ದಾರೆ. ಮಹ್ಮದ್ ಸಾಬ್ ಮತ್ತಿತರರು ಸಾರಿಗೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ನೂರಾರು ಜನರ ಬಳಿ ಹಣ ಪಡೆದು ವಂಚಿಸಿದ್ದಾರೆ. ನಕಲಿ ಆದೇಶ ಪತ್ರ ನೀಡಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳುವ ಮೂಲಕ ನ್ಯಾಯ ಒದಗಿಸುವಂತೆ ಕೇಳಿಕೊಳ್ಳುತ್ತಾರೆ. ದೂರು ಆಧರಿಸಿ ಸಿಪಿಐ ಫೈಜುಲ್ಲಾ ನೇತೃತ್ವದ ತಂಡ ತನಿಖೆ ಕೈಗೊಂಡಾಗ ವಂಚಕರು ಬಲೆಗೆ ಬಿದ್ದಿದ್ದಾರೆ. ಮಂಜುನಾಥ ಹಾಗೂ ಅನಿಲ್ ಈಗಾಗಲೇ ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದು, ಪರಪ್ಪನ ಅಗ್ರಹಾರದಲ್ಲಿದ್ದರು. ಕೋರ್ಟ್ ಅನುಮತಿ ಪಡೆದು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ.