ದಾವಣಗೆರೆ: ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ಕೇಸ್ ನಲ್ಲಿ ಬೇಲ್ ಮೇಲೆ ಜೈಲಿನಿಂದ ಬಿಡುಗಡೆಯಾಗುತ್ತಲೇ ಇಂದು ಚನ್ನಗಿರಿಯ ಚನ್ನೇಶಪುರ ಗ್ರಾಮದಲ್ಲಿ ಬೆಂಬಲಿಗರ ‘ಸಂಕಲ್ಪ ಸಭೆ’ಯನ್ನು ಕರೆದಿದ್ದರು. ಈ ಸಭೆಯಲ್ಲಿ ಚನ್ನಗಿರಿಯಿಂದ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನ ಕೈಗೊಂಡಿದ್ದಾರೆ. ಇದರಿಂದ ಚನ್ನಗಿರಿ ರಣ ಕಣ ರಂಗೇರಿದೆ.
ಭ್ರಣ್ಟಾಚಾರ ಹಿನ್ನೆಲೆ ಹಾಲಿ ಶಾಸಕ ಬಿಜೆಪಿಯ ಮಾಡಾಳ್ ವಿರೂಪಾಕ್ಷಪ್ಪಗೆ ಟಿಕೆಟ್ ಕೈತಪ್ಪಿತ್ತು. ಪುತ್ರನ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಅವರು ಶನಿವಾರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು.
ಪುತ್ರ ಪ್ರಶಾಂತ್ ಮಾಡಾಳ್ ಲಂಚ ಪ್ರಕರಣ ಬೆಳಕಿಗೆ ಬಂದಾಗಲೇ ಅವರಿಗೆ ಟಿಕೆಟ್ ಕೈತಪ್ಪಲಿದೆ ಎಂಬ ಸುದ್ದಿ ಹಬ್ಬಿತ್ತು. ಇನ್ನೊಬ್ಬ ಪುತ್ರ ಮಾಡಾಳ್ ಮಲ್ಲಿಕಾರ್ಜುನ್‌ಗೆ ಚುನಾವಣೆಗೆ ಸ್ಪರ್ಧಿಸಲು ಮಾಡಾಳ್ ಮಲ್ಲಿಕಾರ್ಜುನ್ ತಯಾರಿ ನಡೆಸಿದ್ದರು. ಚುನಾವಣಾ ದಿನಾಂಕ ಘೋಷಣೆಯಾಗದಿದ್ದರೂ ಸಹ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದರು. ಆದರೆ ಬಿಜೆಪಿ ಎಚ್. ಎಸ್. ಶಿವಕುಮಾರ್‌ಗೆ ಟಿಕೆಟ್ ನೀಡಿದೆ.
ಮಾಡಾಳ್ ಮಲ್ಲಿಕಾರ್ಜುನ್ ಬೆಂಬಲಿಗರ ಸಭೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗುವ ಘೋಷಣೆ ಮಾಡಿದ್ದಾರೆ. ಏಪ್ರಿಲ್ 20ರ ತನಕ ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಅವಕಾಶವಿದೆ. ಚನ್ನಗಿರಿಯಲ್ಲಿ ಎಚ್. ಎಸ್. ಶಿವಕುಮಾರ್ ಬಿಎಪಿ, ಬಸವರಾಜು ವಿ. ಶಿವಗಂಗಾ ಕಾಂಗ್ರೆಸ್ ಮತ್ತು ಯೋಗೀಶ್ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.



