ದಾವಣಗೆರೆ: ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ, ಹೊನ್ನನಾಯ್ಕನಹಳ್ಳಿ, ಬೆಂಕಿಕೆರೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಠಿಸಿದ್ದ 4 ವರ್ಷದ ಹೆಣ್ಣು ಚಿರತೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ.
ನಿತ್ಯ ಭಯದಲ್ಲಿದ್ದ ರೈತರು, ಸಾರ್ವಜನಿಕರು
ಈ ಮೂರು ಗ್ರಾಮಗಳಲ್ಲಿ ಚಿರತೆ ಭಯಹುಟ್ಟಿಸಿತ್ತು. ಸಾಕಿದ ಕುರಿಗಳನ್ನು, ಬೀದಿನಾಯಿಗಳನ್ನು ತಿನ್ನುತ್ತಾ ಜನತೆ ಭಯದಲ್ಲೇ ಕಾಲ ಕಳೆಯುವಂತೆ ಮಾಡಿತ್ತು. ರೈತರು ಹೊಲ, ತೋಟಗಳಿಗೆ
ಭಯದಿಂದಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಚನ್ನಗಿರಿ ವಲಯ ಅರಣ್ಯಾಧಿಕಾರಿಗಳಿಗೆ ದೂರು
ನೀಡಿದ್ದರು. ದೂರಿನ ಮೇರೆಗೆ ವಲಯ ಅರಣ್ಯಾಧಿಕಾರಿ ಶ್ವೇತಾ ಅವರು ಗ್ರಾಮದಲ್ಲಿ ಚಿರತೆ ಸಂಚರಿಸಿದ ಸ್ಥಳಗಳನ್ನು ಸಿಬ್ಬಂದಿ ಜತೆ ಪರಿಶೀಲನೆ ನಡೆಸಿ ಬೋನ್‌ಗೆ ಅಳವಡಿಸಿದ್ದರು. ಮೂರು ತಿಂಗಳ ಹಿಂದೆ ಅಳವಡಿಸಿದ್ದ ಬೋನಿಗೆ ಸೋಮವಾರ ಬೆಳಗಿನ ಜಾವ ಚಿರತೆ ಸೆರೆಸಿಕ್ಕಿದೆ.
ಗ್ರಾಮಸ್ಥರ ಆತಂಕ ದೂರ
ಚಿರತೆ ಸೆರೆಹಿಡಿಯುವ ಸಲುವಾಗಿ ಆಯಾಕಟ್ಟಿನ ಸ್ಥಳವಾದ ಹೊದಿಗೆರೆಯಿಂದ ಹೊನ್ನನಾಯ್ಕನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ
ಬದಿಯ ಸಂತೋಷ್ ಎಂಬವರ ತೋಟದ ಬಳಿ ಚಿರತೆ ಸೆರೆ ಹಿಡಿಯಲು ಬೋನ್ ಅಳವಡಿಸಲಾಗಿತ್ತು. ಚಿರತೆ ಸೆರೆ ಸಿಕ್ಕಿದ್ದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಭದ್ರಾ ಅಭಯಾರಣ್ಯಕ್ಕೆ ರವಾನೆ
ಚಿರತೆಯನ್ನು ಭದ್ರಾ ಅಭಯಾರಣ್ಯಕ್ಕೆ ಸುರಕ್ಷಿತವಾಗಿ ಸಾಗಿಸಲಾಗಿದೆ. ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಸುಧಾಕರ್, ಅಣ್ಣಾನಾಯ್ಕ, ಗಸ್ತು ವನಪಾಲಕರಾದ ಬಸವನಗೌಡ, ದೀಪಕ್, ಪ್ರಭು ಇದ್ದರು.



